ಅಬುಧಾಬಿ, ಸೆಪ್ಟೆಂಬರ್ 21, 2021 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ ನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.
ಆರ್ ಸಿಬಿ ನಿಗದಿಪಡಿಸಿದ್ದ 93 ರನ್ ಗಳ ಸಾಧಾರಣ ಗುರಿಯನ್ನು ಸುಲಲಿತವಾಗಿ ಬೆನ್ನತ್ತಿದ ಕೆಕೆಆರ್ ತಂಡ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೆಕೆಆರ್ ಪರ ಆರಂಭಿಕ ಆಟಗಾರ ಶುಭಮನ್ ಗಿಲ್ (48) ಮತ್ತು ವೆಂಕಟೇಶ್ ಅಯ್ಯರ್ (41 ರನ್) ಜೋಡಿ ಪಂದ್ಯವನ್ನು ಬೆಂಗಳೂರಿಂದ ಕಸಿದುಕೊಂಡಿತ್ತು. ಆಂತಿಮ ಹಂತದಲ್ಲಿ ಗೆಲುವಿಗೆ ಕೇವಲ 11 ರನ್ ಗಳು ಬೇಕಿದ್ದಾಗ 48 ರನ್ ಗಳಿ ಅರ್ಧಶತಕದ ಹೊಸ್ತಿಲಲ್ಲಿದ್ದ ಶುಭಮನ್ ಗಿಲ್ ಅವರು ಚಹಲ್ ಎಸೆತದಲ್ಲಿ ಔಟಾದರು. ಬಳಿಕ ವೆಂಕಟೇಶ್ ಅಯ್ಯರ್ ಗೆಲುವಿನ ಔಪಾಚಾರಿಕತೆ ಪೂರ್ಣಗೊಳಿಸಿದರು.
ಈ ಪಂದ್ಯದ ಭರ್ಜರಿ ಜಯದ ಮೂಲಕ ಕೋಲ್ಕತಾ ವಿಶೇಷ ದಾಖಲೆ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳಿರುವಂತೆಯೇ ಪಂದ್ಯ ಜಯಿಸಿದ ತಂಡಗಳ ಪಟ್ಟಿಯಲ್ಲಿ ಕೆಕೆಆರ್ ಸ್ಥಾನಗಳಿಸಿದೆ. ಈ ಪಂದ್ಯದಲ್ಲಿ ಕೋಲ್ಕತಾ ಇನ್ನೂ 10 ಓವರ್ ಗಳು ಅಂದರೆ 60 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಜಯಿಸಿದ್ದು, ಆ ಮೂಲಕ ಅತೀ ಹೆಚ್ಚು ಎಸೆತಗಳಿರುವಂತೆಯೇ ಪಂದ್ಯ ಜಯಿಸಿದ ತಂಡಗಳ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆ.
ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಮುಂಬೈ ಇದ್ದು, ಇದೇ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2008ರಲ್ಲಿ ಮುಂಬೈ ಇನ್ನೂ 87 ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿತ್ತು. 2ನೇ ಸ್ಥಾನದಲ್ಲಿ ಕೆಟಿಕೆ (ಕೊಚ್ಚಿ ಟಸ್ಕರ್ಸ್ ಕೇರಳ) ಇದ್ದು 2011ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ 76 ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿತ್ತು, ಮೂರನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ಇದ್ದು 2017ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 73 ಎಸೆತಗಳು ಬಾಕಿ ಇರುವಂತೆ ಪಂದ್ಯ ಗೆದ್ದಿತ್ತು. 4ನೇ ಸ್ಥಾನದಲ್ಲಿ ಆರ್ ಸಿಬಿ ಇದ್ದು 2018ರಲ್ಲಿ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ 71 ಎಸೆತ ಬಾಕಿ ಇರುವಂತೆ ಪಂದ್ಯ ಜಯಿಸಿತ್ತು.
0 comments:
Post a Comment