ಬೆಂಗಳೂರು, ಸೆಪ್ಟಂಬರ್ 20, 2021 (ಕರಾವಳಿ ಟೈಮ್ಸ್) : ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದ್ದು, ಶೇ.29.91 ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು kea.kar.nic.in ವೆಬ್‍ಸೈಟ್‍ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ವಿಜ್ಞಾನ ವಿಭಾಗದಲ್ಲಿ 70.83%, ವಾಣಿಜ್ಯ ವಿಭಾಗದಲ್ಲಿ 29.98% ಹಾಗೂ ಕಲಾ ವಿಭಾಗದಲ್ಲಿ 39.06% ಫಲಿತಾಂಶ ದಾಖಲಾಗಿದೆ. ಈ ಬಾರಿಯೂ ಶೇ.36.72 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ. 26.06 ಫಲಿತಾಂಶ ದಾಖಲಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 573 ಅತೀ ಹೆಚ್ಚಿನ ಅಂಕವಾಗಿದ್ದು, ವಾಣಿಜ್ಯ ವಿಭಾಗದಲ್ಲಿ 594 ಹಾಗೂ ಕಲಾ ವಿಭಾಗದಲ್ಲಿ 592 ಅತೀ ಹೆಚ್ಚಿನ ಅಂಕ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ತೃತೀಯ ಹಾಗೂ ಕೊಡಗು ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
580 ವಿದ್ಯಾರ್ಥಿಗಳು 85%ಕ್ಕಿಂತ ಅಧಿಕ ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ. 1,939 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 1578 ಮಂದಿ ದ್ವಿತೀಯ ದರ್ಜೆಯಲ್ಲಿ ಹಾಗೂ 1410 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಅಭ್ಯರ್ಥಿಗಳನ್ನು ಹೊರತುಪಡಿಸಿ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಎಲ್ಲ ವಿದ್ಯಾರ್ಥಿಗಳ ಎಸ್‍ಎಸ್‍ಎಲ್‍ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಉತ್ತೀರ್ಣ ಮಾಡಲಾಗಿತ್ತು. ಆದರೆ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು.
17470 ಮಂದಿ ಖಾಸಗಿ ಅಭ್ಯರ್ಥಿಗಳ ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಫಲಿತಾಂಶ ಆಧರಿಸಿ ನೀಡಿದ ಫಲಿತಾಂಶ ರದ್ದುಪಡಿಸಿಕೊಂಡಿದ್ದ 592 ಅಭ್ಯರ್ಥಿಗಳೂ ಸೇರಿ ಒಟ್ಟು 18,413 ಮಂದಿಗೆ ಆಗಸ್ಟ್ 19 ರಿಂದ ಸೆಪ್ಟೆಂಬರ್‍ವರೆಗೆ ಪರೀಕ್ಷೆ ನಡೆಸಿತ್ತು.
0 comments:
Post a Comment