ಬಂಟ್ವಾಳ, ಆಗಸ್ಟ್ 06, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಂಗಬೆಟ್ಟು ಗ್ರಾಮದ ಅಳಿಕೆ ಮನೆ ನಿವಾಸಿ ಫೆಲಿಕ್ಸ್ ಫಲೇರಾ ಅವರ ಪುತ್ರ ಆಲ್ವಿನ್ ರಿಚರ್ಡ್ ಫಲೇರಾ ಅವರಿಗೆ ಆರೋಪಿ ಅನಿಲ್ ಎಂಬಾತ ಬೋರ್ ವೆಲ್ ವಾಹನ ಬಂದಿದ್ದರಿಂದ ಊರಿನ ರಸ್ತೆ ಹಾಳಾಗಿದೆ ಎಂದು ಹಲ್ಲೆ ನಡೆಸಿದ ಬಗ್ಗೆ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಆಲ್ವಿನ್ ಅವರು ರಸ್ತೆ ಬದಿ ತನ್ನ ತಂದೆಯೊಂದಿಗೆ ಸ್ಕೂಟರ್ ಜೊತೆ ನಿಂತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿ ಅನಿಲ್ ನಿನ್ನಿಂದಾಗಿ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಕಾಲಿನಿಂದ ಹಾಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಹೆಲ್ಮೆಟಿನಿಂದ ಸ್ಕೂಟರಿನ ಡೂಮಿಗೆ ಬಡಿದಿದ್ದು ಇದರಿಂದ ಸ್ಕೂಟರಿಗೂ ಹಾನಿ ಸಂಭವಿಸಿದೆ.
ಆಲ್ವಿನ್ ಅವರು ಕೃಷಿ ಚಟುವಟಿಕೆಗಾಗಿ ಇತ್ತೀಚೆಗೆ ಬೋರ್ ವೆಲ್ ಕೊರೆಸಿದ್ದು, ಈ ಸಂದರ್ಭ ಬೋರ್ ವೆಲ್ ವಾಹನ ಬಂದು ರಸ್ತೆ ಹಾಳಾಗಿದೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ. ಹಲ್ಲೆ ಸಂದರ್ಭ ಸ್ಥಳದಲ್ಲಿದ್ದವರು ಹಲ್ಲೆಯಿಂದ ಆಲ್ವಿನ್ ನನ್ನು ರಕ್ಷಿಸಿದ್ದು, ಈ ಸಂದರ್ಭ ಆರೋಪಿ ಮತ್ತೆ ಜೀವಬೆದರಿಕೆ ಒಡ್ಡಿದ್ದಾನೆ ಎಂದು ಆಲ್ವಿನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2021 ಕಲಂ 323, 324, 506, 427 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment