ಬಂಟ್ವಾಳ, ಆಗಸ್ಟ್ 13, 2021 (ಕರಾವಳಿ ಟೈಮ್ಸ್) : ಸಂಘ-ಸಂಸ್ಥೆಗಳು ಬಡವರಿಗೆ ಕ್ಷಣಿಕ ನೆರವಿನ ಸುಖ ನೀಡುವ ಬದಲಾಗಿ ದೀರ್ಘ ಕಾಲೀನ ಉತ್ತೇಜಿತ ನೆರವು ನೀಡಿ ಫಲಾನುಭವಿಗಳ ಶಾಶ್ವತ ಸಬಲೀಕರಣಕ್ಕೆ ಮುಂದಾಗಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎ ಬಿ ಇಬ್ರಾಹಿಂ ಕರೆ ನೀಡಿದರು.
ಮಂಗಳೂರಿನ ಹಿದಾಯ ಫೌಂಡೇಶನ್ ಸಂಸ್ಥೆಯ ವತಿಯಿಂದ ಕಾವಳಕಟ್ಟೆಯ ಹಿದಾಯ ಶೇರ್ ಆಂಡ್ ಕೇರ್ ಕಾಲೋನಿಯಲ್ಲಿ ಗುರುವಾರ ನಡೆದ ‘ಕುಟುಂಬ ಶೈಕ್ಷಣಿಕ ದತ್ತು ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು ಫಲಾನುಭವಿಗಳಿಗೆ ಅಲ್ಪಾವಧಿಯ ನೆರವನ್ನು ನೀಡುವ ಬದಲು ಶೈಕ್ಷಣಿಕ ಉತ್ತೇಜನದ ಮೂಲಕ ದೀರ್ಘಾವಧಿಯ ಕಾರ್ಯಕ್ರಮ ಅನುಷ್ಟಾನಗೊಳಿಸಿದರೆ ಅದರಿಂದ ಶಾಶ್ವತ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಭಾಗವಹಿಸಿದ್ದರು. ಹಿದಾಯ ಫೌಂಡೇಶನ್ ಅನಿವಾಸಿ ಸದಸ್ಯ ಮುಹಮ್ಮದ್ ಶಮೀಮ್, ಹಿದಾಯ ಫೌಂಡೇಶನ್ ಕೋಶಾಧಿಕಾರಿ ಝಿಯಾವುದ್ದೀನ್ ಉಪಸ್ಥಿತರಿದ್ದರು.
ಇದೇ ವೇಳೆ 15 ಕುಟುಂಬಗಳಿಗೆ ಜ್ಞಾನ ಕಿಟ್‍ಗಳನ್ನು ವಿತರಿಸಲಾಯಿತು. ಹಿದಾಯ ಫೌಂಡೇಶನ್ ವತಿಯಿಂದ ಪ್ರತೀ ತಿಂಗಳು ಆಹಾರ ಸಾಮಗ್ರಿಗಳನ್ನು ವಿತರಿಸುವ 250 ಕುಟುಂಬಗಳನ್ನು ಸಮೀಕ್ಷೆ ನಡೆಸಿ ಅವುಗಳ ಪೈಕಿ ಅರ್ಹ 15 ಕುಟುಂಬಗಳನ್ನು ಆಯ್ಕೆ ಮಾಡಿ ಅವರ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಒದಗಿಸಲು ‘ಕುಟುಂಬ ಶೈಕ್ಷಣಿಕ ದತ್ತು ಯೋಜನೆ’ ರೂಪಿಸಲಾಗಿದೆ.
ಹಿದಾಯ ಫೌಂಡೇಶನ್ ಕಾರ್ಯಕ್ರಮ ಸಂಯೋಜಕ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಸ್ಥೆಯ ಆಡಳಿತಾಧಿಕಾರಿ ಆಬಿದ್ ಅಝ್ಗರ್ ವಂದಿಸಿದರು. ಮುಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment