ಬೆಂಗಳೂರು, ಆಗಸ್ಟ್ 09, 2021 (ಕರಾವಳಿ ಟೈಮ್ಸ್) : ಇನ್ನು ಮುಂದೆ ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದು ಎಂದು ರಾಜ್ಯ ಸರಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸುವ ಮೂಲಕ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಿದೆ.
ಸಾಮಾನ್ಯವಾಗಿ ಸರಕಾರಿ ಕಾರ್ಯಕ್ರಮ ಕಚೇರಿಗೆ ಸೀಮಿತಗೊಂಡು ನಾಲ್ಕು ಗೋಡೆಗಳ ಮಧ್ಯೆ ಸರಳವಾಗಿ ನಡೆಯುವುದಾದರೂ ಅದಕ್ಕಾಗಿ ಹೂವು, ಹಣ್ಣು ಹಂಪಲು, ತುರಾಯಿ ಎಂದು ವಿನಾ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಇದೀಗ ಬೊಮ್ಮಾಯಿ ಸರಕಾರ ಅದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಧಿಕೃತ ಆದೇಶ ಹೊರಡಿಸಿದೆ.
ಈ ಬಗ್ಗೆ ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಈ ಆದೇಶ ಹೊರಬಂದಿದೆ. ರಾಜ್ಯ ಸರಕಾರರ ಮತ್ತು ಸರಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಸರಕಾರದ ಈ ನಿರ್ದೇಶನವನ್ನು ಚಾಚೂ ತಪ್ಪದೇ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸರಕಾರದ ಎಲ್ಲಾ ಇಲಾಖೆಗಳು ಮತ್ತು ರಾಜ್ಯ ಸರಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಆದೇಶದ ಪ್ರತಿ ರವಾನಿಸಲಾಗಿದೆ.
0 comments:
Post a Comment