ರಾಜಧರ್ಮ ಹೇಳಿಕೆ ನಡುವೆಯೂ ಸರಕಾರದ ಸವಲತ್ತಿನಲ್ಲಿ ತಾರತಮ್ಯ : ಕಾರ್ಮಿಕರ, ಬಡವರ ಪರ ಆಖಾಡಕ್ಕಿಳಿದ ಮಾಜಿ ಸಚಿವ, ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ - Karavali Times ರಾಜಧರ್ಮ ಹೇಳಿಕೆ ನಡುವೆಯೂ ಸರಕಾರದ ಸವಲತ್ತಿನಲ್ಲಿ ತಾರತಮ್ಯ : ಕಾರ್ಮಿಕರ, ಬಡವರ ಪರ ಆಖಾಡಕ್ಕಿಳಿದ ಮಾಜಿ ಸಚಿವ, ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ - Karavali Times

728x90

31 August 2021

ರಾಜಧರ್ಮ ಹೇಳಿಕೆ ನಡುವೆಯೂ ಸರಕಾರದ ಸವಲತ್ತಿನಲ್ಲಿ ತಾರತಮ್ಯ : ಕಾರ್ಮಿಕರ, ಬಡವರ ಪರ ಆಖಾಡಕ್ಕಿಳಿದ ಮಾಜಿ ಸಚಿವ, ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ

 ಬಂಟ್ವಾಳ, ಆಗಸ್ಟ್ 31, 2021 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ರಾಜಧರ್ಮದ ಹೇಳಿಕೆ ಮಧ್ಯೆಯೂ ಸರಕಾರಿ ಸವಲತ್ತುಗಳನ್ನು ಖಾಸಗಿ ಸೊತ್ತಿನಂತೆ ಜನರನ್ನು ವಿಭಜಿಸಿ ನೀಡುವ ಮೂಲಕ ಅನ್ಯಾಯ, ಅಕ್ರಮ ಎಸಗಲಾಗುತ್ತಿದೆ ಎಂದು ಆಕ್ರೋಶಿತರಾದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ತಂಡ ಕಾರ್ಮಿಕರ, ಬಡವರ ಪರವಾಗಿ ಮಂಗಳವಾರ ಆಖಾಡಕ್ಕಿಳಿದಿದೆ. 

ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಾರ್ವಜನಿಕರ ಸಹಕಾರದೊಂದಿಗೆ ಮಂಗಳವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರ ಕಚೇರಿಗೆ ಹಠಾತ್ ಆಗಿ ಮುತ್ತಿಗೆ ಹಾಕಿ ಕೆ ಎಸ್ ಆರ್ ಟಿ ಸಿ ಯ ಕೋವಿಡ್ ಪರೀಕ್ಷಾ ಐಸಿಯು ಬಸ್ ಸೇವೆ, ಕೋವಿಡ್ ವ್ಯಾಕ್ಸಿನ್ ನೀಡಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಆಹಾರ ಕಿಟ್ ಕಾರ್ಯಕ್ರಮಗಳಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಿದರಲ್ಲದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಸೌಲಭ್ಯಗಳನ್ನು ನೀಡುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರೆಂದು ತಾರತಮ್ಯ ಮಾಡಲಾಗುತ್ತಿದೆ. ಆಹಾರದ ಕಿಟ್‍ಗಳು ಫಲಾನುಭವಿ ಕಾರ್ಮಿಕರ ಬದಲು ಬಿಜೆಪಿ ಕಾರ್ಯಕರ್ತರ ಪಾಲಾಗುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಎಲ್ಲರಿಗೂ ಸಮಾನವಾಗಿ ಸೌಲಭ್ಯಗಳು ಸಿಗಬೇಕು. ಈ ಅನ್ಯಾಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ ತಹಶೀಲ್ದಾರ್ ಅವರನ್ನು ಆಗ್ರಹಿಸಿದರು. ತಾರತಮ್ಯ ನೀತಿ ಅನುಸರಿಸಲು ಪ್ರಚೋದನೆ ನೀಡುತ್ತಿರುವ ಶಾಸಕ ರಾಜೇಶ್ ನಾಯ್ಕ್, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಗೆ ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು. 

ಈ ಸಂದರ್ಭ ಮಾತನಾಡಿದ ರಮಾನಾಥ ರೈ, ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿಷ್ಪಕ್ಷಪಾತವಾಗಿ ಕೊರೊನಾ ಸೋಕಿಂತರಿಗೆ ವಿಶೇಷ ಕಿಟ್ ನೀಡಲಾಗಿದೆ. ಆದರೆ ಪ್ರಸ್ತುತ ಸರಕಾರದ ಕೆಎಸ್‍ಆರ್‍ಟಿಸಿಯ ಐಸಿಯು ಬಸ್ಸು ಬಂಟ್ವಾಳ ವಿಧಾನಸಭಾ ಕೇತ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಬಿಜೆಪಿ ಅಧಿಕಾರದಲ್ಲಿರುವ ಪಂಚಾಯತಿಗಳಲ್ಲಿ  ಆರೋಗ್ಯ ಸೇವೆ ನೀಡಲಾಗುತ್ತಿದೆ,  ಬಿಜೆಪಿ ಅಧಿಕಾರದಲ್ಲಿಲ್ಲದ ಪಂಚಾಯತಿಗಳಲ್ಲಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ನೀಡಲಾಗುತ್ತದೆ. 2 ಸಾವಿರ ರೂಪಾಯಿ ಬೆಲೆಬಾಳುವ ಆಹಾರದ ಕಿಟ್ ಕಾರ್ಮಿಕರಿಗೆ ಸರಕಾರದ ಕಾರ್ಮಿಕ ಮಂಡಳಿ ವತಿಯಿಂದ ನೀಡಲಾಗುತ್ತಿದೆ. ಪಂಚಾಯತ್ ಮೂಲಕ ನೀಡಬೇಕಾದ ಈ ಆಹಾರದ ಕಿಟನ್ನು ಖಾಸಗಿ ವ್ಯಕ್ತಿಗಳ ಮನೆಯಲ್ಲಿ ವಿತರಿಸಲಾಗುತ್ತಿದೆ. 2 ಸಾವಿರ ರೂಪಾಯಿ ಮೌಲ್ಯದ ಕಿಟ್‍ನಲ್ಲಿ ಗೋಲ್‍ಮಾಲ್ ನಡೆದಿದ್ದು ಈಗ ಕೇವಲ 700 ರೂಪಾಯಿಯ ವಸ್ತುಗಳು ಮಾತ್ರ ಇದೆ ಎಂದು ಆರೋಪಿಸಿದ ಅವರು ಈ ವಸ್ತುಗಳನ್ನು ಯಾರು ತಿಂದಿದ್ದಾರೆ ಎನ್ನುವುದು ತನಿಖೆಯಾಗಬೇಕು ಎಂದು ಆಗ್ರಹಿಸಿದರು. 

ರಾಜಾಧರ್ಮ ಹೇಳುವವರು ಮಾಡುವುದು ಅನ್ಯಾಯ, ರಾಜಕೀಯ ಮಾಡುವುದು ರಾಜ ಧರ್ಮವಲ್ಲ,  ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವುದೇ ರಾಜಧರ್ಮ. ಅಧಿಕಾರಿಗಳು ತಪ್ಪು ಮಾಡಿದರೆ ನಮ್ಮ ಹೋರಾಟ ಎಂದಿಗೂ ಇದೆ ಎಂದು ಎಚ್ಚರಿಸಿದರು.  

ಆಹಾರದ ಕಿಟ್ಟನ್ನು ಸರಕಾರದ ನಿಯಾಮವಳಿಯಂತೆ ಪಂಚಾಯತಿಗಳಲ್ಲಿಯೇ ನೀಡಬೇಕು, ತೆರಿಗೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಾವತಿಸುತ್ತಿದ್ದು, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಕಿಟ್ ನೀಡಬೇಕು, ಸರಕಾರದ ಕಿಟ್ಟನ್ನು ಅವರ ಮನೆಯಿಂದ ಕೊಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ, ಶಕ್ತಿ ಕೇಂದ್ರದವರು ಕರೆ ಮಾಡಿ ಹೇಳಿದವರಿಗೆ ಮಾತ್ರ 94ಸಿಯಡಿ ಹಕ್ಕು ಪತ್ರ ನೀಡಲಾಗುತ್ತಿದೆ. ಈ ಅವ್ಯವಸ್ಥೆಯನ್ನು ಖಂಡಿಸಿದರು. ಸರಕಾರದ ಸೌಲಭ್ಯಗಳು ರಾಜಕೀಯ ರಹಿತವಾಗಿ ಪ್ರತಿಯೊಬ್ಬ ಬಡವನಿಗೂ ನ್ಯಾಯೋಚಿತವಾಗಿ ಸಿಗಬೇಕು ಎಂದವರು ಒತ್ತಾಯಿಸಿದರು. ಈ ಅವ್ಯವಸ್ಥೆ ಸರಿಪಡಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ, ಅವ್ಯವಸ್ಥೆ, ಅನ್ಯಾಯ ಇದೇ ರೀತಿ  ಮುಂದುವರಿದರೆ ಐಸಿಯು ಬಸ್ಸಿನಡಿ ಮಲಗಿ ಪ್ರತಿಭಟಿಸುವುದಾಗಿ ಇದೇ ವೇಳೆ ಎಚ್ಚರಿಸಿದ ಮಾಜಿ ಸಚಿವರು, ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗಿದೆ  ಎಂದರು. 

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಸುಲೈಮಾನ್ ನೆಹರುನಗರ, ಮಹಮ್ಮದ್ ಶರೀಫ್, ಮಾಯಿಲಪ್ಪ ಸಾಲ್ಯಾನ್, ಜನಾರ್ಧನ ಚೆಂಡ್ತಿಮಾರ್, ಗಂಗಾಧರ್ ಪೂಜಾರಿ, ಸದಾಶಿವ ಬಂಗೇರ, ಪ್ರಶಾಂತ್ ಕುಲಾಲ್, ಮಧುಸೂದನ್ ಶೆಣೈ, ಯೂಸುಫ್ ಕರಂದಾಡಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಇಬ್ರಾಹಿಂ ನವಾಝ್ ಬಡಕಬೈಲು, ಜಯಂತಿ ಪೂಜಾರಿ, ಆಲ್ಬರ್ಟ್ ಮಿನೇಜಸ್, ಮಹಮ್ಮದ್ ನಂದಾವರ, ಸಂಪತ್ ಕುಮಾರ್ ಶೆಟ್ಟಿ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಾಜಧರ್ಮ ಹೇಳಿಕೆ ನಡುವೆಯೂ ಸರಕಾರದ ಸವಲತ್ತಿನಲ್ಲಿ ತಾರತಮ್ಯ : ಕಾರ್ಮಿಕರ, ಬಡವರ ಪರ ಆಖಾಡಕ್ಕಿಳಿದ ಮಾಜಿ ಸಚಿವ, ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ Rating: 5 Reviewed By: karavali Times
Scroll to Top