ಬೆಂಗಳೂರು, ಆಗಸ್ಟ್ 03, 2021 (ಕರಾವಳಿ ಟೈಮ್ಸ್) : ಕೊರೋನಾ 2ನೇ ಅಲೆ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಪರೀಕ್ಷೆ ನಡೆಸದೆ ಶಿಕ್ಷಣ ಇಲಾಖೆ ಪರ್ಯಾಯ ನಿಯಮದಡಿ ಸಿದ್ದಪಡಿಸಿ ಪ್ರಕಟಿಸಿದ ದ್ವಿತೀಯ ಪಿಯುಸಿ ಫಲಿತಾಂಶವನ್ನು ರಾಜ್ಯದ 878 ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ.
ನಿರೀಕ್ಷಿತ ಅಂಕ ಬಂದಿಲ್ಲ ಎಂದು ಫಲಿತಾಂಶ ತಿರಸ್ಕರಿಸಿರುವ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ.
ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇಲಾಖೆ ಪ್ರಕಟಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿತ್ತು. 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವನ್ನೂ ನೀಡುವುದಾಗಿಯೂ ಇದೇ ವೇಳೆ ಇಲಾಖೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 878 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಆಗಸ್ಟ್ 19 ರಂದು ಪರೀಕ್ಷೆ ಬರೆಯಲು ಇಲಾಖೆ ದಿನಾಂಕ ನಿಗದಿಗೊಳಿಸಿದೆ.
ಫಲಿತಾಂಶ ತಿರಸ್ಕರಿಸಿದವರಲ್ಲಿ ವಿಜಯನಗರದ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ 104 ವಿದ್ಯಾರ್ಥಿಗಳು ಸೇರಿದ್ದು, ಒಂದೇ ಕಾಲೇಜಿನ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ ಒಂದೇ ಉದಾಹರಣೆ ಇದಾಗಿದೆ. 95% ಅಂಕ ಬಂದ ವಿದ್ಯಾರ್ಥಿಗಳೂ ಕೂಡಾ ಈ ಕಾಲೇಜಿನಲ್ಲಿ ಫಲಿತಾಂಶ ತಿಸ್ಕರಿಸಿರುವುದು ವಿಶೇಷ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ 220ಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ.
0 comments:
Post a Comment