ಬೆಂಗಳೂರು, ಆಗಸ್ಟ್ 11, 2021 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಮರುದಿನ ಅಂದರೆ ಮಂಗಳವಾರದಿಂದ ರಾಜ್ಯಾದ್ಯಂತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಪಿಯು ಇಲಾಖೆಯ ವೇಳಾಪಟ್ಟಿಯಂತೆ ಆಗಸ್ಟ್ 10 ರಿಂದ 31ರವರೆಗೆ ದಂಡ ರಹಿತವಾಗಿ ಕಾಲೇಜುಗಳಲ್ಲಿ ದಾಖಲಾತಿ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಬಳಿಕ ಸೆ. 1 ರಿಂದ 11ರವರೆಗೆ ದಾಖಲಾತಿಗೆ 670/- ರೂಪಾಯಿ ದಂಡ ಶುಲ್ಕ ಪಾವತಿಸಬೇಕಾಗಿದೆ. ಸೆ. 13 ರಿಂದ 25ರವರೆಗೆ ದಾಖಲಾತಿಗೆ ವಿದ್ಯಾರ್ಥಿಗಳು 2,890/- ರೂಪಾಯಿ ವಿಶೇಷ ದಂಡ ಶುಲ್ಕದೊಂದಿಗೆ ಕಾಲೇಜು ದಾಖಲಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 16 ರಿಂದಲೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಆರಂಭಿಸಲು ಈಗಾಗಲೇ ಪಿಯು ಇಲಾಖೆ ಆದೇಶಿಸಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲಾ 8.71 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಪಾಸ್ ಆಗಿರುವುದರಿಂದ ಪಿಯು ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ತೀವ್ರ ಒತ್ತಡದ ಸನ್ನಿವೇಶ ನಿರ್ಮಾಣಗೊಂಡಿದೆ. ಕಳೆದ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಶೇ 71.80 ಮಂದಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯು ಪ್ರವೇಶಕ್ಕೆ ಅರ್ಹರಾಗಿದ್ದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ 2.5 ಲಕ್ಷ ವಿದ್ಯಾರ್ಥಿಗಳು ಪಿಯು ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. ಸರಕಾರ ಪಿಯು ಕಾಲೇಜುಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಸೀಟುಗಳು ಪ್ರವೇಶಕ್ಕೆ ಲಭ್ಯವಿದೆ ಎಂದು ಹೇಳಿದ್ದರೂ ಹೆಚ್ಚು ಬೇಡಿಕೆ ಇರುವ ವಾಣಿಜ್ಯ, ವಿಜ್ಞಾನ ಕೋರ್ಸುಗಳು ಎಲ್ಲ ಕಾಲೇಜುಗಳಲ್ಲೂ ಇಲ್ಲದಿರುವುದು ಒತ್ತಡಕ್ಕೆ ಕಾರಣವಾಗಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳೂ ಪಾಸ್ ಎಂದು ಶಿಕ್ಷಣ ಸಚಿವರು ಮುಂಚಿತವಾಗಿಯೇ ಪ್ರಕಟಿಸಿದ್ದರಿಂದ ರಾಜ್ಯ ಹಲವು ಖಾಸಗಿ ಕಾಲೇಜುಗಳು ಫಲಿತಾಂಶ ಪೂರ್ವದಲ್ಲೇ ವಿದ್ಯಾರ್ಥಿಗಳಿಗೆ ಸೀಟು ಕಾಯ್ದಿರಿಸುವಂತೆ ಸೂಚಿಸಿ ಆ ಪ್ರಕಾರ ದಾಖಲಾತಿಗೆ ವ್ಯವಸ್ಥೆ ಮಾಡಿಕೊಂಡಿತ್ತು. ಇದೀಗ ಫಲಿತಾಂಶದ ಬಳಿಕ ಅಧಿಕೃತ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ.
0 comments:
Post a Comment