ಮಂಗಳೂರು, ಆಗಸ್ಟ್ 19, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ 2ಕ್ಕಿಂತ ಜಾಸ್ತಿ ಇರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಆಗಸ್ಟ್ 23 ರಿಂದ ಆರಂಭವಾಗಬೇಕಿದ್ದ 9 ಹಾಗೂ 10ನೇ ತರಗತಿ ಶಾಲಾರಂಭ ಆದೇಶಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಗಸ್ಟ್ 28ರವರೆಗೆ ತಾತ್ಕಾಲಿಕ ತಡೆ ನೀಡಿದೆ.
2021-22ನೇ ಶೈಕ್ಷಣಿಕ ವರ್ಷದ 9 ಮತ್ತು 10ನೇ ತರಗತಿಗಳ ಭೌತಿಕ ತರಗತಿಗಳನ್ನು ಆಗಸ್ಟ್ 23 ರಿಂದ ಪ್ರತಿ ದಿನ ಬೆಳಿಗ್ಗೆ ನಡೆಸಲು ರಾಜ್ಯ ಸರಕಾರದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದೆ ಸೂಚಿಸಿತ್ತು. ಆದರೆ, ದ.ಕ. ಜಿಲ್ಲೆಯಲ್ಲಿ ಇದೀಗ ಪಾಸಿಟಿವಿಟಿ ದರ ಶೇ ಎರಡಕ್ಕಿಂತ ಜಾಸ್ತಿ ಇರುವುದರಿಂದ ದ.ಕಮ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಗಸ್ಟ್ 28ರ ತನಕ ಭೌತಿಕ ತರಗತಿಗಳು ನಡೆಸದಂತೆ ಶಿಕ್ಷಣ ಇಲಾಖೆ ಮರು ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದನುಸಾರ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಅನ್ವಯವಾಗುವಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವುದನ್ನು ಆಗಸ್ಟ್ 28 ರವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶಿಕ್ಷಕರು ಆನ್‍ಲೈನ್ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಯಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Ok
ReplyDelete