ಬೆಂಗಳೂರು, ಆಗಸ್ಟ್ 19, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಇತ್ತೀಚೆಗೆ ಘೋಷಿಸಿದ್ದ ಕೋವಿಡ್ ಪರಿಹಾರ ನಿಧಿ ಮೊತ್ತ ಹಲವು ಮಂದಿಗೆ ಇನ್ನೂ ಮಂಜೂರೂ ಆಗದೆ ತಿರಸ್ಕಾರವೂ ಆಗದೆ ಜನ ಆಕಾಶಕ್ಕೆ ಕಣ್ಣು ಹಾಕಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಹಲವು ವರ್ಗಗಳಿಗೆ ಕೋವಿಡ್ ಪರಿಹಾರ ಧನಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನಿಸಿತ್ತು. ಚಾಲಕರಿಗೆ, ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಹೀಗೆ ಹಲವು ವರ್ಗಗಳ ಕೋವಿಡ್ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಈ ಪರಿಹಾರ ಅರ್ಜಿ ಆಹ್ವಾನಿಸಲಾಗಿತ್ತು. ಸರಕಾರದ ಕಿಂಚಿತ್ ಪರಿಹಾರ ಧನ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಸ್ವಲ್ಪ ಮಟ್ಟಿಗಾದರೂ ಸಹಾಯ ಆಗಬಹುದು ಎಂದು ತಿಳಿದು ಅರ್ಹ ಪಲಾನುಭವಿಗಳು ಲಾಕ್ ಡೌನ್ ಮಧ್ಯೆಯೂ ಅತ್ತಿಂದಿತ್ತ ಅಲೆದಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಸಲ್ಲಿಸಿದ ಕೆಲವು ಮಂದಿಗೆ ಈ ಪರಿಹಾರ ಮೊತ್ತ ಮಂಜೂರಾಗಿ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗಿದೆ. ಆದರೆ ಇನ್ನೂ ಹಲವು ಮಂದಿ ಪರಿಹಾರ ಮೊತ್ತ ಕೈ ಸೇರದೆ ನಿತ್ಯವೂ ಬ್ಯಾಂಕಿನಿಂದ ಏನಾದರೂ ಸಂದೇಶ ಬರುತ್ತದೆಯೇ ಎಂಬುದರತ್ತ ಚಿತ್ತ ನೆಟ್ಟು ಕಾಯುತ್ತಲೇ ಇದ್ದಾರೆ. ಬದಲಾದ ಬ್ಯಾಂಕ್ ನಿಯಮ ಹಾಗೂ ಕೆಲವು ಬ್ಯಾಂಕ್‍ಗಳು ಇನ್ನೊಂದು ಬ್ಯಾಂಕ್ ಜೊತೆ ವಿಲೀನಗೊಂಡ ಕಾರಣ ಆಧಾರ್ ಲಿಂಕ್ ತೆರವಾಗಿರುವುದರಿಂದ ಆಧಾರ್ ಲಿಂಕ್ ಆಗಿಲ್ಲ ಎಂಬ ಕಾರಣಕ್ಕೆ ಪರಿಹಾರ ಮೊತ್ತ ಜಮೆ ಆಗಿಲ್ಲ ಎಂಬ ಉತ್ತರ ಇಲಾಖಾಧಿಕಾರಿಗಳಿಂದ ಬರುತ್ತಿದೆಯಾದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲಾಖಾಧಿಕಾರಿಗಳಲ್ಲೂ ಇಲ್ಲದೆ ಅರ್ಜಿದಾರರು ಪರಿತಪಿಸುವಂತಾಗಿದೆ. ಒಂದು ವೇಳೇ ಅಧಾರ್ ಲಿಂಕ್ ಸಮಸ್ಯೆ ಇದ್ದರೆ ತಕ್ಷಣ ಅರ್ಜಿದಾರರಿಗೆ ಈ ಬಗ್ಗೆ ಮಾಹಿತಿ ನೀಡಿ ಮತ್ತೆ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಮಾಡಬೇಕೇ ಹೊರತು ಕಾಟಾಚಾರದ ಘೋಷಣೆ ಸರಕಾರದ್ದು ಆಗಬಾರದು ಎಂಬ ಅಭಿಪ್ರಾಯ ಅರ್ಜಿದಾರರಿಂದ ಕೇಳಿ ಬರುತ್ತಿದೆ.
ಹಲವು ಮಂದಿ ರಿಕ್ಷಾ, ಕ್ಯಾಬ್, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ತಾವು ಸರಕಾರಕ್ಕೆ ಸಲ್ಲಿಸಿದ ಅರ್ಜಿಯ ವಿಲೇವಾರಿ ಬಗ್ಗೆ ಬರೋಬ್ಬರಿ ಕಳೆದೆರಡು ತಿಂಗಳುಗಳಿಂದ ಕಾಯುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ವಿಚಾರಿಸಿದರೆ ಅವರಿಂದಲೂ ಯಾವುದೇ ಸಮರ್ಪಕ ಮಾಹಿತಿ ಅರ್ಜಿದಾರರಿಗೆ ಸಿಗುತ್ತಿಲ್ಲ.
ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಅರ್ಜಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅರ್ಜಿದಾರರ ಮನವಿಯನ್ನಾದರೂ ಸ್ವೀಕರಿಸಿ ಹಿರಿಯ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಸಲ್ಲಿಸುವ ಮನಸ್ಸು ಮಾಡುತ್ತಿದ್ದಾರಾದರೂ, ಅಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್ ಚಾಲಕರ ಪೆಂಡಿಂಗ್ ಅರ್ಜಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಅರ್ಜಿದಾರರ ಮನವಿಗೆ ಕ್ಯಾರೇ ಅನ್ನುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಇದೀಗ ಯಡಿಯೂರಪ್ಪ ಬದಲಾಗಿದ್ದು, ಬೊಮ್ಮಾಯಿ ನೂತನ ಸಿಎಂ ಆಗಿದ್ದು, ಬದಲಾದ ಸರಕಾರ ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಬಡವರ ಕೋವಿಡ್ ಪರಿಹಾರದ ಮೊತ್ತ ಶೀಘ್ರ ಖಾತೆ ಸೇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಡ ಚಾಲಕರು ಹಾಗೂ ಕಾರ್ಮಿಕರು ಆಗ್ರಹಿಸಿದ್ದಾರೆ.
0 comments:
Post a Comment