ಬೆಂಗಳೂರು, ಆಗಸ್ಟ್ 11, 2021 (ಕರಾವಳಿ ಟೈಮ್ಸ್) : ಈ ಬಾರಿ ವಿಶಿಷ್ಟವಾಗಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಒಎಂಆರ್ ಶೀಟಿನಲ್ಲಿ ಉತ್ತರಿಸುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿರುವ ಹಿನ್ನಲೆಯಲ್ಲಿ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ನಡೆಸಿರುವುದರಿಂದ ಫಲಿತಾಂಶದ ಮರು ಮೌಲ್ಯಮಾಪನ ಕೋರಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿಲ್ಲ.
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿ ವಲಯದಿಂದ ಮರು ಮೌಲ್ಯಮಾಪನದ ಬಗ್ಗೆ ಮಾತುಗಳು ಕೇಳಿ ಬಂದಿತ್ತಾದರೂ ಈ ಬಾರಿ ಡಿಜಿಟಲ್ ಮೌಲ್ಯಮಾಪನ ನಡೆದಿರುವುದರಿಂದ ತಪ್ಪುಗಳಾಗುವ ಸಾಧ್ಯತೆ ಇಲ್ಲ. ಅದರಿಂದಾಗಿ ಮರುಮೌಲ್ಯಮಾಪನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಲ್ಲ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಲಿಖಿತವಾಗಿ ಉತ್ತರ ಬರೆಯುತ್ತಿದ್ದರು. ಆದರೆ, ಈ ಬಾರಿ ಬಹು ಆಯ್ಕೆ ಮಾದರಿ ಪ್ರಶ್ನೆಗಳ ಮೂಲಕ ಕೇವಲ ಸರಿ ಉತ್ತರದ ಸಂಖ್ಯೆಯನ್ನು ಒಎಂಆರ್ ಶೀಟ್‍ನಲ್ಲಿ ಗುರುತಿಸುವ ಶೈಲಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಬಳಿಕ ಒಎಂಆರ್ ಶೀಟ್ ಗಳನ್ನು ಡಿಜಿಟಲ್ ಸ್ಕ್ಯಾನಿಂಗ್ ಮೂಲಕ ಯಾಂತ್ರಿಕೃತ ಮೌಲ್ಯಮಾಪನ ನಡೆಸಲಾಗಿದೆ. ಹಾಗಾಗಿ ಮೌಲ್ಯಮಾಪನ ತಪ್ಪಾಗಲು ಸಾಧ್ಯವಿಲ್ಲ. ಇನ್ನು ಪರೀಕ್ಷೆ ಬಳಿಕ ಕೀ ಉತ್ತರಗಳನ್ನೂ ನೀಡಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆಕ್ಷೇಪಗಳನ್ನು ಪರಿಶೀಲಿಸಿ ಕನ್ನಡ ಭಾಷಾ ವಿಷಯದ ಒಂದು ಪ್ರಶ್ನೆ ಗೊಂದಲದಿಂದ ಕೂಡಿದ್ದರಿಂದ ಸಾಮೂಕವಾಗಿ ಎಲ್ಲ ಮಕ್ಕಳಿಗೂ ಒಂದು ಕೃಪಾಂಕ ನೀಡಲಾಗಿದೆ. ಈ ಎಲ್ಲಾ ಕಾರಣದಿಂದ ಮರು ಮೌಲ್ಯಮಾಪನದ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದ್ದಾರೆ.
0 comments:
Post a Comment