ದ.ಕ. ಜಿಲ್ಲೆಯಲ್ಲಿ ನೈಟ್, ವೀಕೆಂಡ್ ನಿರ್ಬಂಧ ಮುಂದುವರೆಸಿ ನೂತನ ಮಾರ್ಗಸೂಚಿ ಹೊರಡಿಸಿದ ಡೀಸಿ ರಾಜೇಂದ್ರ  - Karavali Times ದ.ಕ. ಜಿಲ್ಲೆಯಲ್ಲಿ ನೈಟ್, ವೀಕೆಂಡ್ ನಿರ್ಬಂಧ ಮುಂದುವರೆಸಿ ನೂತನ ಮಾರ್ಗಸೂಚಿ ಹೊರಡಿಸಿದ ಡೀಸಿ ರಾಜೇಂದ್ರ  - Karavali Times

728x90

31 August 2021

ದ.ಕ. ಜಿಲ್ಲೆಯಲ್ಲಿ ನೈಟ್, ವೀಕೆಂಡ್ ನಿರ್ಬಂಧ ಮುಂದುವರೆಸಿ ನೂತನ ಮಾರ್ಗಸೂಚಿ ಹೊರಡಿಸಿದ ಡೀಸಿ ರಾಜೇಂದ್ರ 

 ಮಂಗಳೂರು, ಆಗಸ್ಟ್ 31, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಪರಿಷ್ಕೃತ ಆದೇಶ ಹಾಗೂ ಜಿಲ್ಲೆಯ ಸನ್ನಿವೇಶಕ್ಕೆ ಹೊಂದಿಕೊಂಡು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ ಅವರು ಜಿಲ್ಲೆಯ ಮಟ್ಟಿಗೆ ನೂತನ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದಾರೆ. ನೂ

ನೂತನ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಸೆ. 13ರವರೆಗೆ ವಾರಾಂತ್ಯ ಕರ್ಫ್ಯೂ ಹಾಗೂ ಮುಂದಿನ ಆದೇಶದವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ ಕರ್ಫ್ಯೂ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದ್ದು, ವಾರಾಂತ್ಯ ಕಫ್ರ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ. 

 ವೀಕೆಂಡ್ ನಿರ್ಬಂಧ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಪರೀಕ್ಷಾ ಪ್ರವೇಶ ಪತ್ರವನ್ನೇ ವಿದ್ಯಾರ್ಥಿಗಳ ಪ್ರಯಾಣಕ್ಕೆ ಪಾಸ್ ಎಂದು ಪರಿಗಣಿಸಲಾಗುವುದು. 

ವಾರಾಂತ್ಯ ಕಫ್ರ್ಯೂ ಅವಧಿಯಲ್ಲಿ ಹಾಲು ಮಾರಾಟ ಮಳಿಗೆಗಳಿಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ವಿವಾಹ ಅಥವಾ ಕೌಟುಂಬಿಕ ಕಾರ್ಯಗಳನ್ನು ಗರಿಷ್ಟ 50 ಜನರ ಪರಿಮಿತಿಗೊಳಪಟ್ಟು ಸ್ಥಳೀಯ ಆಡಳಿತದ ಪ್ರಾಧಿಕಾರಗಳಿಂದ ಪೂರ್ವಾನುಮತಿಯೊಂದಿಗೆ ಆಯೋಜಿಸಲು ಅನುಮತಿ ನೀಡಲಾಗಿದೆ. ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಸಮಾರಂಭಕ್ಕೆ ಭೇಟಿ ನೀಡಿ ಕೊರೊಮಾ ನಿಯಮಾವಳಿ ಉಲ್ಲಂಘನೆ ಆಗದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. 

ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳು (ನರ್ಸಿಂಗ್, ವೈದ್ಯಕೀಯ, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಇತ್ಯಾದಿ ಸೇರಿದಂತೆ) 72 ಗಂಟೆಗಳಿಗಿಂತ ಮುಂಚಿತವಾಗಿ ನೆಗೆಟಿವ್ ವರದಿಯೊಂದಿಗೆ ದ.ಕ. ಜಿಲ್ಲೆಯನ್ನು ಪ್ರವೇಶಿಸಲು ಅವಕಾಶವಿರುತ್ತದೆ. ಮತ್ತು ಅವರನ್ನು 7 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಿ, 7 ದಿನಗಳ ನಂತರ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸಲಾಗುವುದು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

 ಕೇರಳದಿಂದ ಜಿಲ್ಲೆಗೆ ಉದ್ಯೋಗದ ಸಲುವಾಗಿ ಅಥವಾ ಭೇಟಿ ಕಾರಣಕ್ಕಾಗಿ ಆಗಮಿಸುವ ಪ್ರತಿಯೊಬ್ಬರಿಗೂ ಮೇಲಿನ ನಿಯಮ ಅನ್ವಯವಾಗಲಿದೆ, ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಸಂದರ್ಭದಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿಯನ್ನು ಹಾಜರುಪಡಿಸತಕ್ಕದ್ದು ಹಾಗೂ ತಮ್ಮ ಸಿಬ್ಬಂದಿಗಳು ಆರ್‌ಟಿಪಿಸಿಆರ್‌‌ ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿಯು ಆಯಾ ಸಂಸ್ಥೆಗೆ ಸೇರಿರುತ್ತದೆ ಎಂದು ತಿಳಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಜರುಗಿಸಲಾಗುವುದು ಎಂದು ಡೀಸಿ ಆದೇಶದಲ್ಲಿ ತಿಳಿಸಿದ್ದಾರೆ. 

 ರಾತ್ರಿ ಕಪ್ರ್ಯೂ ಸಂದರ್ಭ ಸಾರ್ವಜನಿಕರ ಓಡಾಟವನ್ನು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಅತ್ಯಾವಶ್ಯಕ ಹಾಗೂ ತುರ್ತು ಸಂದರ್ಭಗಳನ್ನು ಹೊರತು ಪಡಿಸಿ ಸಂಪೂರ್ಣವಾಗಿ ಜನರ ಓಡಾಟ ನಿಷೇಧಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು ಅಥವಾ ವ್ಯಕ್ತಿಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿರುವಂತಹ ಎಲ್ಲಾ ಕೈಗಾರಿಕೆಗಳು ಅಥವಾ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತಹ ಸಂಸ್ಥೆಗಳ ನೌಕರರ ಸಂಚಾರಕ್ಕೆ, ಅವರ ಸಂಬಂಧಪಟ್ಟ ಸಂಸ್ಥೆ, ಕಂಪನಿಯು ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸಲು ಅನುಮತಿಸಲಾಗಿದೆ. 

 ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಅವರ ಸಂಬಂಧಪಟ್ಟ ಸಂಸ್ಥೆ, ಕಂಪನಿಯು ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸಲು ಅನುಮತಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕಂಪನಿಗಳು, ಸಂಸ್ಥೆಯ ಅತ್ಯಾವಶ್ಯಕ ಸಿಬ್ಬಂದಿ, ನೌಕರರು ಮಾತ್ರ ಕಚೇರಿಯಿಂದ ಕಾರ್ಯನಿರ್ವಹಿಸಬೇಕು, ಉಳಿದ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. 

ಔಷಧ ಮಳಿಗೆಗಳು ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅತ್ಯಾವಶ್ಯಕ ಸೇವೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ, ಉಳಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಖಾಲಿ ವಾಹನಗಳು ಸೇರಿದಂತೆ, ಟ್ರಕ್‍ಗಳು, ಸರಕು ಸಾಗಣೆ ವಾಹನಗಳು ಅಥವಾ ಯಾವುದೇ ಸರಕು ಸಾಗಣೆ ವಾಹನಗಳ ಮೂಲಕ ಎಲ್ಲಾ ಬಗೆಯ ಸರಕುಗಳನ್ನು ಸಾಗಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಇ-ವಾಣಿಜ್ಯ ಕಂಪನಿಗಳಿಂದ ಸರಕುಗಳ ಹೋಮ್ ಡೆಲಿವರಿಗೆ ಮತ್ತು ಅವುಗಳ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಗಿದೆ. ಬಸ್ಸು, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲು ವಿಮಾನ ನಿಲ್ದಾಣಗಳಿಗೆ, ಬಸ್ ಟರ್ಮಿನಲ್, ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಧಿಕೃತ ಪ್ರಯಾಣ ದಾಖಲೆ ಅಥವಾ ಟಿಕೇಟ್ ಪ್ರದರ್ಶಿಸಿದಲ್ಲಿ ಅಂತಹ ಸಂಚಾರಕ್ಕೆ ಅನುಮತಿ ನೀಡಲಾಗುವುದು. 

 ವಾರಾಂತ್ಯ ಕರ್ಫ್ಯೂ ವೇಳೆ ಅತ್ಯಾವಶ್ಯಕ ಮತ್ತು ತುರ್ತು ಕಾರ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ಸಂಜೆ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಡೀಸಿ ಆದೇಶಿಸಿದ್ದಾರೆ. 

ತುರ್ತು, ಅತ್ಯವಶ್ಯಕ ಸೇವೆಗಳು ಮತ್ತು ಕೊರೊನಾ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಂತಾದವುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸತಕ್ಕದ್ದು ಮತ್ತು ಅವುಗಳ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಅನಿರ್ಬಂಧಿತ ಓಡಾಟಕ್ಕೆ ಅವಕಾಶ ನೀಡಲಾಗಿದೆ. ತುರ್ತು ಮತ್ತು ಅತ್ಯವಶ್ಯಕ ಸೇವೆಗಳನ್ನು ನಿರ್ವಹಿಸುವ ಮತ್ತು 24x7 ಕಾರ್ಯಾಚರಣೆಗಳು ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು, ಕಂಪನಿಗಳು ಮತ್ತು ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದೂ, ಅಂತಹ ಸಂಸ್ಥೆಗಳ ನೌಕರರು ಆಯಾ ಸಂಘ ಅಥವಾ ಸಂಸ್ಥೆಗಳು ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸುವ ಮೂಲಕ ಸಂಚರಿಸಲು ಅನುಮತಿಸಲಾಗಿದೆ. ಆದರೆ, ಸಾಧ್ಯವಾದಷ್ಟು ಮಟ್ಟಿಗೆ ನೌಕರರನ್ನು ಮನೆಯಿಂದಲೇ ಕಾರ್ಯನಿರ್ವಹಿಸುವುದಕ್ಕೆ ಪ್ರೋತ್ಸಾಹಿಸಬೇಕು ಎಂದು ಸೂಚಿಸಲಾಗಿದೆ. 

 ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ಅಗತ್ಯವಿರುವ ರೋಗಿಗಳು, ಅವರ ಪರಿಚಾರಕರು ಅಥವಾ ವ್ಯಕ್ತಿಗಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಕನಿಷ್ಠ ದಾಖಲೆಗಳನ್ನು ಹಾಜರುಪಡಿಸಿ ಸಂಚರಿಸಲು ಅನುಮತಿ ನೀಡಲಾಗಿದೆ. ಕೊರೊನಾ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲು ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು ಮಾರಾಟ ಮಾಡುವ ಅಂಗಡಿಗಳು, ಬೀದಿ ಬದಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿಗಳು, ಸ್ವತಂತ್ರ ಮದ್ಯದಂಗಡಿಗಳು ಪಾರ್ಸೆಲ್ ಗೆ ಸೀಮಿತಗೊಂಡು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಜನರು ತಮ್ಮ ಮನೆಯ ಹೊರಗೆ ಓಡಾಡುವುದನ್ನು ಕಡಿಮೆ ಮಾಡುವುದಕ್ಕಾಗಿ 24x7 ಅವಧಿಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹೋಮ್ ಡೆಲಿವೆರಿ ಮಾಡಲು ಪ್ರೋತ್ಸಾಹಿಸಬೇಕು. ಈ ಎಲ್ಲಾ ಕಾರ್ಯಾಚರಣೆಗಳು ಕೊರೊನಾ ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ಅನುಮತಿ ನೀಡಲಾಗಿದೆ.

 ರೆಸ್ಟೋರೆಂಟ್ ಮತ್ತು ಹೊಟೇಲ್‍ಗಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿ ನೀಡಲು ಮಾತ್ರ ಅನುಮತಿ ನೀಡಲಾಗಿದೆ. "ಬಸ್, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲು ವಿಮಾನ ನಿಲ್ದಾಣಗಳಿಗೆ, ಬಸ್ ಟರ್ಮಿನಲ್ ಅಥವಾ ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಧಿಕೃತ ಪ್ರಯಾಣ ದಾಖಲೆ ಅಥವಾ ಟಿಕೆಟ್ ಪ್ರದರ್ಶಿಸಿದ ಮತ್ತು ಕೊರೊನಾ ಸಮುಚಿತ ವರ್ತನೆಯನ್ನು ಪಾಲಿಸಿದ ನಂತರವೇ ಅಂತಹ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಡೀಸಿ ಹೊರಡಿಸಿದ ನೂತನ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯಲ್ಲಿ ನೈಟ್, ವೀಕೆಂಡ್ ನಿರ್ಬಂಧ ಮುಂದುವರೆಸಿ ನೂತನ ಮಾರ್ಗಸೂಚಿ ಹೊರಡಿಸಿದ ಡೀಸಿ ರಾಜೇಂದ್ರ  Rating: 5 Reviewed By: karavali Times
Scroll to Top