ಬಂಟ್ವಾಳ, ಆಗಸ್ಟ್ 17, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆ ಹಾಗೂ ಸಜಿಪಮುನ್ನೂರು ಗ್ರಾಮ ಪಂಚಾಯತ್ ನಡುವಿನ ಗಡಿ ಪ್ರದೇಶವಾಗಿರುವ ನಂದಾವರ ಸೇತುವೆ ಬಳಿ ಜನ ತ್ಯಾಜ್ಯ ಎಸೆದು ಮಲಿನಗೊಳಿಸುವ ಕೃತ್ಯ ಮುಂದುವರಿದಿದ್ದು, ಇದನ್ನು ನಿಯಂತ್ರಿಸುವುದು ಎರಡೂ ಸ್ಥಳೀಯಾಡಳಿತಗಳಿಗೂ ಸವಾಲಾಗಿ ಪರಿಣಮಿಸಿದೆ. ತ್ಯಾಜ್ಯ ಎಸೆಯುವ ಜಾಗ ಪುರಸಭಾ ವ್ಯಾಪ್ತಿಗೆ ಬರುತ್ತಿದ್ದರೂ ಅದರಾಚೆಯಿಂದ ಬರುವ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಬೇಕಾಬಿಟ್ಟಿ ತ್ಯಾಜ್ಯ ತಂದು ಎಸೆಯುತ್ತಿದ್ದಾರೆ ಎಂದು ಪುರಸಭಾಡಳಿತ ಬೊಟ್ಟು ಮಾಡಿದರೆ, ಸದ್ರಿ ಸ್ಥಳ ಪುರಸಭಾ ವ್ಯಾಪ್ತಿಗೆ ಬರುತ್ತಿರುವುದರಿಂದ ಅಲ್ಲಿನ ತ್ಯಾಜ್ಯ ರಾಶಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಬಂಟ್ವಾಳ ಪುರಸಭೆಗೇ ಸೇರಿದ್ದು ಎಂದು ಸಜಿಪಮುನ್ನೂರು ಗ್ರಾಮ ಪಂಚಾಯತಿಗೆ ಸಂಬಂಧಪಟ್ಟವರು ಹೇಳಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಜನ ಮಾತ್ರ ಇಲ್ಲಿ ನಿರಂತರವಾಗಿ ಕಸ-ತ್ಯಾಜ್ಯ ಎಸೆಯುವ ಕೃತ್ಯವನ್ನು ಮುಂದುವರಿಸುತ್ತಲೇ ಇದ್ದಾರೆ. ಹೀಗೆ ಜನ ಎಸೆದು ಹೋಗುವ ತ್ಯಾಜ್ಯಗಳು ರಸ್ತೆ ಬದಿಯಲ್ಲೇ ರಾಶಿ ಬಿದ್ದು ಕೊಳೆಯುತ್ತಿದ್ದು, ಅದನ್ನು ಜಾನುವಾರುಗಳು ಹಾಗೂ ನಾಯಿಗಳೂ ಎಳೆದು ತಂದು ರಸ್ತೆ ಮಧ್ಯದಲ್ಲಿಯೇ ತಿಂದು ಅಲ್ಲೆ ಬಿಟ್ಟು ಹೋಗುತ್ತಿದೆ. ಇದರಿಂದಾಗಿ ಸಮೀಪದಲ್ಲಿರುವ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಶಾಲೆ ಹಾಗೂ ನಂದಾವರ ಮಸೀದಿ-ದರ್ಗಾಗಳಿಗೆ ಬರುವ ಸಾರ್ವಜನಿಕರು ತೀವ್ರ ದುರ್ನಾತಯುಕ್ತ ಪರಿಸರವನ್ನು ದಾಟಿ ಹೋಗುವುದೇ ಸವಾಲಾಗಿದೆ. ಈ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ಬಂಟ್ವಾಳ ಪುರಸಭೆ ಹಾಗೂ ಸಜಿಪಮುನ್ನೂರು ಗ್ರಾಮ ಪಂಚಾಯತಿಗೆ ದೂರು ನೀಡುತ್ತಲೇ ಬರುತ್ತಿದ್ದಾರೆ. ಆದರೂ ಎರಡು ಸ್ಥಳೀಯಾಡಳಿತಗಳ ಗಡಿ ಸಮಸ್ಯೆಯಿಂದಾಗಿ ಸಮಸ್ಯೆ ಪರಿಹಾರ ಕನಸಾಗಿಯೇ ಉಳಿದಿದೆ.
ಆದರೂ ಈ ಬಗ್ಗೆ ಸಾರ್ವಜನಿಕ ದೂರಿಗೆ ಸ್ಪಂದಿಸಿ ಬಂಟ್ವಾಳ ಪುರಸಭಾಡಳಿತ ಹಲವು ಬಾರಿ ಇಲ್ಲಿನ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಪುರಸಭೆಯ ತ್ಯಾಜ್ಯ ನಿರ್ವಹಣೆಯ ವಾಹನ ಹಾಗೂ ಪೌರ ಕಾರ್ಮಿಕರನ್ನು ಬಳಸಿ ತ್ಯಾಜ್ಯ ವಿಲೇವಾರಿ ಮಾಡುತ್ತಲೇ ಬಂದಿದೆ. ಪಂಚಾಯತ್ ವ್ಯಾಪ್ತಿಯ ಜನ ತ್ಯಾಜ್ಯ ಎಸೆಯುವುದರಿಂದ ಸಜಿಪಮುನ್ನೂರು ಪಂಚಾಯತ್ ಆಡಳಿತ ತಮ್ಮ ವ್ಯಾಪ್ತಿಯ ಮನೆ ಮನೆ ತ್ಯಾಜ್ಯ ಸಂಗ್ರಹದ ಬಗ್ಗೆ ಸೂಕ್ತ ಕ್ರಮ ಕೈಗೊಂಡರೆ ಈ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಪುರಸಭಾಡಳಿತಕ್ಕೆ ಸಂಬಂಧಪಟ್ಟವರು ಪಂಚಾಯತ್ ಆಡಳಿತಕ್ಕೆ ಸೂಚಿಸುತ್ತಿದ್ದಾರೆ.
ಈ ಎಲ್ಲ ಗೊಂದಲದ ಮಧ್ಯೆ ಮಂಗಳವಾರ ಮತ್ತೆ ಬಂಟ್ವಾಳ ಪುರಸಭಾಡಳಿತ ಸ್ಥಳೀಯ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ನೇತೃತ್ವದಲ್ಲಿ ಇಲ್ಲಿನ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಪುರಸಭೆಯ ಜೆಸಿಬಿ, ವಾಹನ ಹಾಗೂ ಪೌರ ಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯವನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ತ್ಯಾಜ್ಯ ಎಸೆಯುವ ಆಯಕಟ್ಟಿನ ಪ್ರದೇಶಗಳಿಗೆ ಸೀಸಿ ಕ್ಯಾಮೆರಾ ಅಳವಡಿಸಿ ಪರಿಸರ ಮಲಿನಗೊಳಿಸುವ ಕೃತ್ಯ ನಡೆಸುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ಈಗಾಗಲೇ ಸೀಸಿ ಕ್ಯಾಮೆರಾ ಅಳವಡಿಕೆಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಈ ಕಾರ್ಯ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ರಸ್ತೆ ಬದಿ ತ್ಯಾಜ್ಯ ಎಸೆಯದೆ ಪುರಸಭಾ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಿ ಪರಿಸರ ಸ್ವಚ್ಛತೆಗೆ ಸಹಕಾರ ನೀಡುವಂತೆ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ದೀರ್ಘ ಕಾಲದ ತ್ಯಾಜ್ಯ ಸಮಸ್ಯೆ ಯಾವ ರೀತಿಯ ತಾರ್ಕಿಕ ಅಂತ್ಯ ಕಾಣಲಿದೆ ಎಂಬುದನ್ನು ಕಾದುನೋಡಬೇಕಷ್ಟೆ.
0 comments:
Post a Comment