ಬೆಂಗಳೂರು, ಆಗಸ್ಟ್ 30, 2021 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರುವೆಡೆ 6 ರಿಂದ 8ನೇ ತರಗತಿಗೆ ಶಾಲೆ ಆರಂಭಿಸಲು ಮುಖ್ಯಮಂತ್ರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸೋಮವಾರ ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯ ಸಭೆ ನಡೆಸಿದ ಬಳಿಕ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ್ ಅವರು, ದಿನ ಬಿಟ್ಟು ದಿನ ತರಗತಿಗಳು ನಡೆಯಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಶಾಲೆ ನಡೆಯಲಿದೆ. ವಾರಾಂತ್ಯ ಆಗಿರುವ ಶನಿವಾರ ಹಾಗೂ ಭಾನುವಾರ ಶಾಲಾ ಕೊಠಡಿಗಳ ಸ್ಯಾನಿಟೈಸಿಂಗ್ ನಡೆಯಲಿದೆ ಎಂದರು.
ಕೇರಳದಲ್ಲಿ ಸೋಂಕು ಹೆಚ್ಚಿರುವ ಕಾರಣ ಕೇರಳದಿಂದ ಬರುವವರಿಗೆ ಏಳು ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು. ಬಳಿಕ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಂಡು ನೆಗೆಟಿವ್ ವರದಿ ಒಪ್ಪಿಸಬೇಕು ಎಂದ ಸಚಿವ ಅಶೋಕ್ ಕೇರಳ ಗಡಿ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಕೋವಿಡ್ ವಾರಾಂತ್ಯ ನಿರ್ಬಂಧಗಳು ಮುಂದುವರಿಯಲಿದೆ. ಉಡುಪಿ, ಚಿಕ್ಕಮಗಳೂರು, ಮೈಸೂರು, ಹಾಸನ, ಕೋಲಾರ, ಕಲಬುರಗಿಗಳಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಶೇ.1.5ಕ್ಕಿಂತ ಕಡಿಮೆ ಇರುವ ಕಾರಣ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ.
ಮದುವೆ ಸಮಾರಂಭಕ್ಕೆ ಶೇ. 50 ರಷ್ಟು ಅನುಮತಿ ನೀಡಲಾಗಿದೆ. ಕಲ್ಯಾಣ ಮಂಟಪಗಳಲ್ಲಿ ಗರಿಷ್ಠ 400 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಸಂಬಂಧ ಕಲ್ಯಾಣ ಮಂಟಪಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದ ಸಚಿವ ಅಶೋಕ್ 2,912 ಗ್ರಾಮ ಪಂಚಾಯತಿಗಳಲ್ಲಿ ಪಾಸಿಟಿವ್ ದರ ಶೂನ್ಯವಿದೆ. 6,472 ಮಕ್ಕಳ ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, ಇದರಲ್ಲಿ 14 ಮಕ್ಕಳಿಗೆ ಮಾತ್ರ ಪಾಸಿಟಿವ್ ಬಂದಿದೆ. ಗಣೇಶ ಹಬ್ಬಕ್ಕೂ ಮುನ್ನವೇ 6ರಿಂದ 8ನೇ ತರಗತಿಗಳು ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಆರಂಭಿಸಲಾಗುತ್ತದೆ ಎಂದರು.
0 comments:
Post a Comment