ಬೆಂಗಳೂರು, ಆಗಸ್ಟ್ 13, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಆರಂಭವಾಗುವ ಆತಂಕ ಮೂಡಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಹಬ್ಬ-ಹರಿದಿನಗಳಿಗೆ ಅನ್ವಯವಾಗುವಂತೆ ಕಠಿಣ ನಿರ್ಬಂಧ ಜಾರಿಗೊಳಿಸಿ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿರ್ಬಂಧಿಸಲಾಗಿದ್ದು, ಮೊಹರಂ ಹಬ್ಬದ ಪ್ರಯುಕ್ತ ಪ್ರಾರ್ಥನಾ ಸಭೆ ಹಾಗೂ ಮೆರವಣಿಗೆ ನಡೆಸುವುದನ್ನೂ ನಿಷೇಧಿಸಲಾಗಿದೆ. ಸರಕಾರದ ನಿರ್ಬಂಧಗಳನ್ನು ಮೀರಿ ಹಬ್ಬಾಚರಣೆ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರಕಾರ ಆದೇಶದಲ್ಲಿ ಉಲ್ಲೇಖಿಸಿದೆ.
ಆಗಸ್ಟ್ ತಿಂಗಳಿನಿಂದ ಮುಂದಿನ ಅಕ್ಟೋಬರ್ ತಿಂಗಳವರೆಗೆ ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾಪೂಜೆ ಸೇರಿದಂತೆ ಹಬ್ಬಗಳ ಸರತಿಯೇ ಬರುತ್ತಿದೆ. ಹಬ್ಬಗಳ ಆಚರಣೆ ಹೆಸರಿನಲ್ಲಿ ಜನ ಸೇರುವುದರಿಂದ ಸೋಂಕು ವ್ಯಾಪಕವಾಗಿ ಹರಡಬಹುದು ಎಂಬ ತಜ್ಞರ ಸೂಚನೆಯಂತೆ ಮೊಹರಂ ಮತ್ತು ಗೌರಿ ಗಣೇಶ ಹಬ್ಬಗಳ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಗಣೇಶ ಚತುರ್ಥಿಯನ್ನು ಸರಳವಾಗಿ ದೇವಸ್ಥಾನದೊಳಗೆ ಮತ್ತು ಮನೆಯೊಳಗೆ ಮಾತ್ರ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಗಣೇಶನ ಮೂರ್ತಿ ತರುವಾಗ, ವಿಸರ್ಜಿಸುವಾಗ ಮೆರವಣಿಗೆ ಅಥವಾ ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಮನೆಯಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು ಅಥವಾ ಸ್ಥಳೀಯ ಸಂಸ್ಥೆಗಳು ನಿರ್ಮಿಸಿದ ಹೊಂಡ, ಕಲ್ಯಾಣಿ, ಮೊಬೈಲ್ ಟ್ಯಾಂಕ್‍ಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲಿಸಿ ವಿಸರ್ಜಿಸಬೇಕು. ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ನಿತ್ಯವೂ ಸ್ಯಾನಿಟೈಸೇಷನ್ ಮಾಡಬೇಕು. ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಮಾರ್ಗಸೂಚಿಗಳು ಪಾಲನೆಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಮೊಹರಂ ಹಬ್ಬಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆಲಂ ಅಥವಾ ಪಂಜಾ (ಮೊಹರಂ ಆಚರಣೆ) ಮಾಡುವುದು ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಮಸೀದಿ ಆವರಣದಲ್ಲಿ ಸಾಮಾಜಿಕ ಅಂತರದೊಂದಿಗೆ ಸಂಬಂಧಿತ ಆಚರಣೆ ಮಾಡಿಕೊಳ್ಳಬಹುದು. ಪಂಜಾ, ಆಲಂ ಮತ್ತು ತಾಜಿಯತ್‍ಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದ ನೋಡಬೇಕು ಎಂದು ತಿಳಿಸಲಾಗಿದೆ.
ಯಾವುದೇ ಖಾಲಿ ಜಾಗದಲ್ಲಿ ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿಯಿಲ್ಲ. ಕೊರೋನಾ ನಿಯಮಾವಳಿ ಪಾಲಿಸಿ ಮಸೀದಿಯಲ್ಲಿ ಪ್ರಾರ್ಥನೆ ಮಾಡಬೇಕು. ಹೆಚ್ಚು ಜನ ಆಗಮಿಸಿದಲ್ಲಿ 2 ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಮಸೀದಿಯಲ್ಲಿ ಕೊರೋನಾ ಮಾರ್ಗಸೂಚಿ ಸ್ಪಷ್ಟವಾಗಿ ಪಾಲಿಸಬೇಕು. ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ. ಮಸೀದಿ ಹೊರತುಪಡಿಸಿ ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮೊಹರಂ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಮೆರವಣಿಗೆ ಹಾಗೂ ಸಾರ್ವಜನಿಕ ಭಾಷಣ ಮಾಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
0 comments:
Post a Comment