ಬಂಟ್ವಾಳ, ಆಗಸ್ಟ್ 24, 2021 (ಕರಾವಳಿ ಟೈಮ್ಸ್) : ಬಿಜೆಪಿ ವಿಭಜನೆ ನೀತಿಯನ್ನು ಅನುಸರಿಸುತ್ತಿದ್ದು ಈ ಬಗ್ಗೆ ಕಾಂಗ್ರೆಸ್ ಹೋರಾಟಕ್ಕೆ ಸಿದ್ದವಾಗಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಭವ್ಯಾ ನರಸಿಂಹಮೂರ್ತಿ ಕರೆ ನೀಡಿದರು.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಬಿ ಸಿ ರೋಡಿನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ತಿಂಗಳಲ್ಲೇ ಒಂದು ಕೋಟಿ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಓಟು ಪಡೆಯಲು ದೇಶವನ್ನು ವಿಭಜಿಸುತ್ತಿರುವ ಕೇಂದ್ರ ಸರಕಾರ ಕಾಂಗ್ರೆಸ್ ಜಾರಿಗೆ ತಂದಿರುವ ಯೋಜನೆಗಳನ್ನಷ್ಟೆ ಮರುನಾಮಕರಣಗೊಳಿಸಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕೊರೋನಾದಿಂದಾಗಿ ದೇಶ ಶೋಕದಲ್ಲಿದೆ. ಅತ್ಯಾಚಾರ, ಅನಾಚಾರ ಹೆಚ್ಚಾಗಿದೆ. ಪ್ರತಿಭಟನೆಯ ಹೆಸರಿನಲ್ಲಿ ಸಾವು ನೋವುಗಳಾಗಿವೆ. ಹೊಸತನವನ್ನು ರಾಜಕೀಯಕ್ಕೆ ನೀಡುವಂತಾಗಲು ಹೊಸ ಕ್ರಾಂತಿಯ ಅಗತ್ಯವಿದೆ ಎಂದವರು ಹೇಳಿದರು.
ಸಮಾವೇಶ ಉದ್ಘಾಟಿಸಿದ ಕೆಪಿಸಿಸಿ ಬಂಟ್ವಾಳ ಉಸ್ತುವಾರಿ ಸವಿತಾ ರಮೇಶ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರನ್ನು ಕಾಂಗ್ರೆಸ್ ವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಲೆಟರ್ ಹೆಡ್ ಲೀಡರ್ ಆಗುವುದಕ್ಕಿಂತ ನಿರಂತರ ಪಕ್ಷದೊಂದಿಗಿದ್ದು ಗೆಲುವಿಗೆ ಶ್ರಮಿಸಿದರೆ ಮಹಿಳೆಯರು ಮತ್ತಷ್ಟು ಮುಂಚೂಣಿಗೆ ಬರಲು ಸಾಧ್ಯ ಎಂದರು .
ಮಾಜಿ ಸಚಿವ ಬಿ ರಮಾನಾಥ ರೈ , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ , ಕೆಪಿಸಿಸಿ ಸದಸ್ಯರಾದ ಮಮತಾ ಗಟ್ಟಿ , ವೀಣಾ ಭಟ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ , ಜಿ ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಎಂ ಎಸ್ ಮಹಮ್ಮದ್ ಮೊದಲಾದವರು ಭಾಗವಹಿಸಿದ್ದರು. ಇ
ಇದೇ ವೇಳೆ 11 ಮಂದಿ ಹಿರಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು .
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಸ್ವಾಗತಿಸಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಲ್ಮಾ ಮೊರಾಸ್ ವಂದಿಸಿದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment