ಪುತ್ತೂರು, ಆಗಸ್ಟ್ 06, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣೆಯಲ್ಲಿ 1985 ರ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿ ಕಳೆದ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂಲತಃ ತಾಲೂಕಿನ ಚಾರ್ವಾಕ ಗ್ರಾಮದ, ಮುದ್ವ ಅಂಚೆ ವ್ಯಾಪ್ತಿಯ ಕುಂಬ್ಲಾಡಿ ನಿವಾಸಿ ಬಾಬು ಪೂಜಾರಿ ಅವರ ಪುತ್ರ ಲಿಂಗಪ್ಪ (56) ಎಂಬಾತನನ್ನು ಕೊನೆಗೂ ಪತ್ತೆ ಹಚ್ಚಿದ ಪುತ್ತೂರು ಪೊಲೀಸರು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಪುತ್ತೂರು ನಗರ ಠಾಣಾ ಅಪರಾಧ ಕ್ರಮಾಂಕ 117/1985 ಕಲಂ 457, 380 ಐಪಿಸಿ (ಎಲ್‍ಪಿಸಿ 03/ 1989) ರಂತೆ ಕಳವು ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಪ್ರಕರಣ ದಾಖಲಾದ ತಕ್ಷಣದಿಂದಲೇ ಈತ ತಲೆಮರೆಸಿಕೊಂಡಿದ್ದಾನೆ.
ಬಳಿಕ ಈತ ಶಿವಮೊಗ್ಗದಲ್ಲಿ 5 ವರ್ಷಗಳಿಂದ ಅಟೋ ಚಾಲಕನಾಗಿದ್ದು, ನಂತರ ಮಂಗಳೂರಿನ ತಣ್ಣೀರು ಬಾವಿ ಪ್ರದೇಶಕ್ಕೆ ಬಂದು ಭಿನ್ನ ಕೋಮಿಗೆ ಸೇರಿದ ಹುಡುಗಿಯನ್ನು ವಿವಾಹವಾಗಿ ತನ್ನ ಹೆಸರನ್ನು ರೆಹಮತ್ ಖಾನ್ ಬಿನ್ ಅಮ್ಮು ಸಾಹೇಬ್ ಎಂದು ಬದಲಾಯಿಸಿಕೊಂಡು ತಣ್ಣೀರುಬಾವಿಯಲ್ಲಿ ವಾಸವಾಗಿದ್ದ. ನ್ಯಾಯಾಲಯದ ವಾರಂಟ್ ದಸ್ತಗಿರಿಗೆ ತಪ್ಪಿಸಿಕೊಂಡಿದ್ದ ಈತ ಸುಮಾರು 29 ವರ್ಷಗಳ ಕಾಲ ತಣ್ಣೀರು ಬಾವಿಯಲ್ಲಿ ಕಪ್ಪು ಚಿಪ್ಪು (ಸೆಲ್ಫಿಸ್) ವ್ಯಾಪಾರ ಮಾಡಿಕೊಂಡಿದ್ದ. ನಂತರ ಸುಮಾರು 3 ವರ್ಷಗಳಿಂದ ಓಶಿಯನ್ ಕಂಪೆನಿಯಲ್ಲಿ ಕನ್ಸ್ಟ್ರಕ್ಷನ್ ಕೆಲಸವನ್ನು ಮುಂಡಗೋಡಿ, ಹುಬ್ಬಳ್ಳಿ, ಬೆಳಗಾಂ ಮೊದಲಾದೆಡೆ ಮಾಡಿಕೊಂಡಿದ್ದು, ಕಳೆದ ಒಂದು ವಾರದಿಂದ ಮಂಗಳೂರಿನ ತಿರುವೈಲ್ ಗ್ರಾಮ, ವಾಮಂಜೂರು ಹಾಲಿ ವಿಳಾಸಕ್ಕೆ ಬಂದಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪುತ್ತೂರು ನಗರ ಠಾಣಾ ಎಚ್.ಸಿ. ಗಳಾದ ಪರಮೇಶ್ವರ ಹಾಗೂ ಕೃಷ್ಣಪ್ಪ ಅವರು ಜಿಲ್ಲಾ ಎಸ್ಪಿ ಹಾಗೂ ಪುತ್ತೂರು ಎಎಸ್ಪಿ ಅವರ ಮಾರ್ಗದರ್ಶನದಂತೆ, ಪುತ್ತೂರು ನಗರ ಠಾಣಾ ಅಧಿಕಾರಿಗಳಾದ ಗೋಪಾಲ ನಾಯ್ಕ್, ಸುತೇಶ್ ಹಾಗೂ ನಸ್ರೀನ್ ತಾಜ್ ಚಟ್ಟರಕಿ ಅವರ ಸೂಚನೆಯಂತೆ, ಶುಕ್ರವಾರ ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment