ನವದೆಹಲಿ, ಜುಲೈ 07, 2021 (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಮಂತ್ರಿ ಮಂಡಲಕ್ಕೆ ಮೇಜರ್ ಸರ್ಜರಿ ಮಾಡಿದ್ದು, 3 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದಿಂದ ನಾಲ್ಕು ಮಂತ್ರಿ ಮಂಡಲ ಸೇರಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಮಂತ್ರಿಮಂಡಲದಲ್ಲಿ ರಾಜ್ಯದ ಪ್ರತಿನಿಧಿಗಳಾಗಿ ಆರು ಮಂದಿ ಪಾಲು ಪಡೆದಂತಾಗಿದೆ. ಈಗಾಗಲೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿ ಪ್ರಹ್ಲಾದ್ ಜೋಷಿ, ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸಂಪುಟದಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ ಖೂಬಾ, ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ವಿಧಿ ಬೋಧಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಖಾತೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಹಿರಿಯ ಮುಖಂಡೆಯಾಗಿರುವ ಶೋಭಾ ಕರಂದ್ಲಾಜೆ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸಚಿವೆಯಾಗುವ ಮೂಲಕ ಸರೋಜಿನಿ ಮಹಿಷಿ, ಬಸವರಾಜೇಶ್ಚರಿ, ರತ್ನಮಾಲಾ ಸವಣೂರು, ಡಿಕೆ ತಾರಾದೇವಿ, ಮಾರ್ಗರೇಟ್ ಆಳ್ವಾ ಬಳಿಕ ಸಂಪುಟ ಸೇರಿದ ರಾಜ್ಯದ ಆರನೇ ಮಹಿಳೆಯಾಗಿದ್ದಾರೆ. ಸಚಿವ ಡಿವಿ ಸದಾನಂದಗೌಡ ಅವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಲಾಗಿದೆ.
ಚಿತ್ರದುರ್ಗ ಕ್ಷೇತ್ರದ ಸಂಸದ ಎ. ನಾರಾಯಣ ಸ್ವಾಮಿ ಕೂಡಾ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸದರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಕೇಂದ್ರ ಸಚಿವ ಸಂಪುಟದಲ್ಲಿ ನಾರಾಯಣ ಸ್ವಾಮಿ ಸ್ಥಾನ ಪಡೆದಂತಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಿವಾಸಿಯಾದ ಇವರು ಕೃಷಿ, ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬೀದರ್ ಸಂಸದ ಭಗವಂತ ಖೂಬಾ 17ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿಕರೂ ಆಗಿರುವ ಖೂಬಾ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
0 comments:
Post a Comment