ಬಂಟ್ವಾಳ, ಜುಲೈ 18, 2021 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಮುಂಗಾರು ಚುರುಕಾಗಿದ್ದು, ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ನಿಧಾನವಾಗಿ ಏರಿಕೆ ಕಂಡು ಬರುತ್ತಿದ್ದು, ತಾಲೂಕಿನ ಹಲವೆಡೆ ಮಳೆಹಾನಿ ಪ್ರಕರಣಗಳೂ ವರದಿಯಾಗಿವೆ.
ಸಜಿಪಮುನ್ನೂರು ಗ್ರಾಮದ ಅಮೀನಮ್ಮ ಕೋಂ ಅಶ್ರಫ್ ಅವರ ಮನೆಯ ಒಂದು ಪಾಶ್ರ್ವದ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಸಜಿಪಮೂಡ ಗ್ರಾಮದ ನಗ್ರಿಯಲ್ಲಿ ಗುಡ್ಡ ಕುಸಿತಗೊಂಡು ಕೂಸಪ್ಪ ನಾಯ್ಕ ಅವರ ಮನೆಗೆ ಅಪಾಯ ಎದುರಾಗಿದೆ. ಗುಡ್ಡ ಕುಸಿತ ಕಾರಣ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬೇರೆ ಜಾಗಕ್ಕೆ ವರ್ಗಾವಣೆಗೊಳ್ಳುವಂತೆ ತಿಳಿಸಿದ್ದು, ಅವರ ಪೂರ್ಣ ಕುಟುಂಬ ನಾವೂರು ಗ್ರಾಮದ ಸಂಬಂಧಿಕರ ಮನೆಗೆ ವಾಸ್ತವ್ಯ ಬದಲಾಯಿಸಿದ್ದಾರೆ.
ಬೋಳಂತೂರು ಗ್ರಾಮದ ಕೊಕ್ಕಪುಣಿ ನಿವಾಸಿ ನೇಮಕ್ಕು ಅವರ ವಾಸದ ಮನೆಯ ಹಿಂಬದಿಯಲ್ಲಿ ಬರೆ ಜರಿದು ಬಿದ್ದಿರುತ್ತದೆ. ಅಬ್ದುಲ್ ಖಾದ್ರಿ ಅವರ ಮನೆಯ ಕಾಂಪೌಂಡ್ ಕುಸಿದು ಬಿದ್ದಿರುತ್ತದೆ ಹಾಗೂ ಗುಂಡಿಮಜಲು ನಿವಾಸಿ ಚೆನ್ನಪ್ಪ ಪೂಜಾರಿ ಅವರ ಮನೆಯ ಹಿಂಬಾಗದ ತೋಡಿನ ತಡೆಗೋಡೆ ಕುಸಿದು ಬಿದ್ದಿರುತ್ತದೆ.
ಬಂಟ್ವಾಳ ಕಸಬಾ ಗ್ರಾಮದ ಮಣಿ ನಿವಾಸಿ ಬಾಲಕೃಷ್ಣ ಗೌಡ ಬಿನ್ ಸಂಜೀವ ಗೌಡ ಅವರ ಆವರಣ ಗೋಡೆ ಕುಸಿದಿದ್ದು ಯಾವುದೇ ಅಪಾಯ ಸಂಭವಿಸದೆ ಕುಟುಂಬ ಸುರಕ್ಷಿತವಾಗಿದೆ. ಮುಗ್ದಲ್ ಗುಡ್ಡೆ ನಿವಾಸಿ ಶಕುಂತಳಾ ಅವರ ಮನೆ ಕುಸಿದು ಪೂರ್ಣ ಹಾನಿ ಸಂಭವಿಸಿರುತ್ತದೆ. ವಿಟ್ಲಪಡ್ನೂರು ಗ್ರಾಮದ ಕೊಡಂಗೆ ನಿವಾಸಿ ಸುನಿಲ್ ಪಾಯಸ್ ಬಿನ್ ಥಾಮಸ್ ಪಾಯಸ್ ಅವರ ಮನೆಯ ಸಮೀಪದ ಗುಡ್ಡ ಕುಸಿದು ಅಡಿಕೆ ಕೃಷಿಗೆ ಹಾನಿ ಸಂಭವಿಸಿದೆ. ಮನೆಗೆ ಯಾವುದೇ ಹಾನಿ ಸಂಭವಿಸಿರುವುದಿಲ್ಲ.
ಅರಳ ಗ್ರಾಮದ ಕುಟ್ಟಿಕ್ಕಳ ನಿವಾಸಿ ಮುಹಮ್ಮದ್ ಅವರ ವಾಸ್ತವ್ಯದ ಮನೆಯು ಭಾಗಶಃ ಕುಸಿದಿರುತ್ತದೆ. ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ರಾಜೀವಿ ಶೆಟ್ಟಿ ಅವರ ವಾಸ್ತವ್ಯದ ಮನೆಯ ಹಿಂಬದಿ ಧರೆ ಕುಸಿದು ಮನೆಗೆ ಸಣ್ಣ ಪ್ರಮಾಣದ ಹಾನಿಯಾಗಿರುತ್ತದೆ. ಸ್ಥಳೀಯರ ಸಹಾಯದಿಂದ ಕುಸಿದ ಮಣ್ಣು ತೆರವು ಕಾರ್ಯ ಮಾಡಲಾಗಿರುತ್ತದೆ.
ಹಾಗೂ ಬಿ ಮೂಡ ಗ್ರಾಮದ ಮೊಡಂಕಾಪು ದೀಪಿಕಾ ಪ್ರೌಢಶಾಲಾ ಆವರಣ ಗೋಡೆ ಕುಸಿದಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment