ವಿಟ್ಲ, ಜುಲೈ 28, 2021 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸರು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ವೇಳೆ ಬಂದ ಅಟೊ ರಿಕ್ಷಾ ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಚಾಲಕ ರಿಕ್ಷಾ ತಿರುಗಿಸಿದ ಪರಿಣಾಮ ರಸ್ತೆಗೆ ಉರುಳಿದ ವೇಳೆ ಪರಿಶೀಲನೆ ನಡೆಸಿದಾಗ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಗಾಂಜಾ, ಅಟೋ ರಿಕ್ಷಾ ಸಹಿತ ಆರೋಪಿಗಳಾದ ಬಂಟ್ವಾಳ ತಾಲೂಕು, ಸಜಿಪಮೂಡ ಗ್ರಾಮದ ಸುಭಾಶ್ ನಗರ ಸಮೀಪದ ಗುರುಮಂದಿರ ಬಳಿಯ ನಿವಾಸಿ ದಿವಂಗತ ಇಬ್ರಾಹಿಂ ಅವರ ಪುತ್ರ ಆಸಿಫ್ ಯಾನೆ ಆಚಿ (28) ಹಾಗೂ ಕಡಬ ತಾಲೂಕು, ಸವಣೂರು ಸಮೀಪದ ಮಾಂತೂರು-ಚಾಪಳ್ಳ ಮಸೀದಿ ಬಳಿಯ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಫರಾಝ್ (23) ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ಎಸ್ಸೈ ನಾಗಾರಾಜ್ ಎಚ್ ಇ ಮತ್ತು ಠಾಣಾ ಸಿಬ್ಬಂದಿಗಳಾದ ಪ್ರೊಬೆಷನರಿ ಪಿಎಸ್ಐ ಮಂಜುನಾಥ, ಎಚ್ ಸಿ ಪ್ರಸನ್ನ, ಸಿಬ್ಬಂದಿಗಳಾದ ಪ್ರತಾಪ್, ಲೋಕೇಶ್ ಹಾಗೂ ಪ್ರವೀಣ್ ಅವರ ಜೊತೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಮಂಗಳವಾರ ಮಧ್ಯಾಹ್ನ 1-30 ರ ವೇಳೆಗೆ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾವನ್ನು ನಿಲ್ಲಿಸಲು ಸೂಚಿಸಿದಾಗ ಆಟೋ ಚಾಲಕ ಒಮ್ಮೆಲೇ ತಿರುಗಿಸಿದ ಪರಿಣಾಮ ಆಟೋ ರಿಕ್ಷಾ ಚಾಲಕನ ನಿಯಂತ್ರಣ ಮೀರಿ ಉಕ್ಕಡ ಕಡೆಗೆ ಮುಖ ಮಾಡಿ ಮಗುಚಿ ಬಿದ್ದಿದೆ.
ಈ ಸಂದರ್ಭ ರಿಕ್ಷಾದಲ್ಲಿದ್ದವರನ್ನು ರಕ್ಷಿಸುವ ಉದ್ದೇಶದಿಂದ ಪೊಲೀಸರು ಧಾವಿಸಿದ ವೇಳೆ ರಿಕ್ಷಾದಲ್ಲಿದ್ದ ಮೇಲ್ಕಾಣಿಸಿದ ಆರೋಪಿಗಳು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಟೋ ರಿಕ್ಷಾದ ಚಾಲಕನ ಸೀಟಿನ ಅಡಿಯಲ್ಲಿದ್ದ ಗಾಂಜಾ ಕಟ್ಟನ್ನು ಹಾಗೂ ಅಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. 2060 ಗ್ರಾಂ ಗಾಂಜಾ ಇದ್ದು ಇದರ ಅಂದಾಜು ಮೌಲ್ಯ 60 ಸಾವಿರ ರೂಪಾಯಿ ಹಾಗೂ ಕೆಎ-70-0557 ಸಂಖ್ಯೆಯ ಅಟೊ ರಿಕ್ಷಾ ಮೌಲ್ಯ 1.50 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2021 ಕಲಂ: 8(c) R/w 20(B) (II) (b) NDPS ACT, 1985 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment