ಬೆಂಗಳೂರು ಜುಲೈ 18, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ (ಜುಲೈ 19) ಪ್ರಾರಂಭವಾಗಲಿದ್ದು, ಸಕಲ ಸಿದ್ದತೆಗಳೂ ಪೂರ್ಣಗೊಂಡಿದೆ. ಜುಲೈ 19 ಮತ್ತು 22 ರಂದು ಎರಡು ದಿನ ಮಾತ್ರ ಈ ಬಾರಿ ಪರೀಕ್ಷೆ ನಡೆಯಲಿದ್ದು, ಕೆಪಿಎಸ್‍ಸಿ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. 3 ಗಂಟೆಗಳ ಅವಧಿಯಲ್ಲಿ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ತಲಾ 40 ಅಂಕಗಳಿಗೆ ಸೀಮಿತಗೊಂಡು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮೂಲಕ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಸಿದ್ಧತೆ ಪೂರ್ಣಗೊಳಿಸಿರುವ ಶಿಕ್ಷಣ ಇಲಾಖೆ ಕೊರೋನಾ ಮಾರ್ಗಸೂಚಿಯೊಂದಿಗೆ ಪರೀಕ್ಷೆ ನಡೆಸುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಕೊಠಡಿ ತೆರೆಯಲಾಗಿದ್ದು, ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.
ಈ ಭಾರಿ ಒಟ್ಟು 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 4,72,643 ಮಂದಿ ಬಾಲಕರು, 4,3,938 ಮಂದಿ ಬಾಲಕಿಯರು ಸೇರಿ ಒಟ್ಟು 7,83,955 ಹೊಸ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 977 ಮಂದಿ ಪುನಾವರ್ತಿತ ವಿದ್ಯಾರ್ಥಿಗಳು, 21,817 ಮಂದಿ ಖಾಸಗಿ ವಿದ್ಯಾರ್ಥಿಗಳು ಹಾಗೂ 9,419 ಮಂದಿ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ ಒಟ್ಟು 4,884 ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಒಟ್ಟು 7366 ಪರೀಕ್ಷಾ ಕೊಠಡಿಗಳಿವೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಒಂದು ಕೊಠಡಿಯಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದ್ದು, 1.30 ಲಕ್ಷ ಸಿಬ್ಬಂದಿಗಳು ಪರೀಕ್ಷಾ ಕಾರ್ಯ ನಿಭಾಯಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಿದ್ದು, ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷೆ ನಡೆಯಲಿದೆ.
0 comments:
Post a Comment