ಬೆಂಗಳೂರು, ಜುಲೈ 14, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಹಾಗೂ 3ನೇ ಅಲೆಯ ಭೀತಿಯ ನಡುವೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಡೆಯುತ್ತಿದೆಯಾದರೂ ಕಳೆದ ಎಲ್ಲ ಶೈಕ್ಷಣಿಕ ವರ್ಷಗಳಿಗಿಂತ ಈ ಬಾರಿ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಒಎಂಆರ್ (ಆಪ್ಟಿಕಲ್ ಮಾರ್ಕ್ಸ್ ರೀಡರ್) ಉತ್ತರ ಪತ್ರಿಕೆ ಪರಿಪೂರ್ಣವಾಗಿರಲಿದೆ. ಒಎಂಆರ್ ಪತ್ರಿಕೆಯಲ್ಲಿ ಈ ಬಾರಿ ವಿದ್ಯಾರ್ಥಿಗಳು ತಮ್ಮ ಹೆಸರು, ರಿಜಿಸ್ಟರ್ ನಂಬರ್ ಸೇರಿದಂತೆ ಯಾವುದೇ ವಿವರಗಳನ್ನು ನೋಂದಾಯಿಸುವ ಅಗತ್ಯವಿಲ್ಲ. ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯ ಫೆÇೀಟೋ ಸಹಿತ ಎಲ್ಲ ಮಾಹಿತಿಯೂ ಮುದ್ರಿತ ರೂಪದಲ್ಲೇ ಸಿದ್ಧವಾಗಿ ಬರಲಿದೆ. ವಿದ್ಯಾರ್ಥಿಗಳು ಕೇವಲ ತಮ್ಮ ಸಹಿ ಮಾಡಿ, ಒಎಂಅರ್ ಶೀಟ್ ತಮ್ಮದೇ ಎಂದು ಪರಿಶೀಲನೆ ನಡೆಸಿ ಉತ್ತರ ನೀಡುವುದನ್ನು ಆರಂಭಿಸುವುದು ಮಾತ್ರ ಕೆಲಸ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಗಳು ಖಚಿತಪಡಿಸಿವೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಂಪೂರ್ಣವಾಗಿ ವಿದ್ಯಾರ್ಥಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಮೊದಲು ಒಎಂಆರ್ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಈ ಎಲ್ಲಾ ಮಾಹಿತಿಯನ್ನು ತಾವೇ ಬರೆಯಬೇಕಾಗಿತ್ತು. ಅಲ್ಲದೆ ತಮ್ಮ ಭಾವಚಿತ್ರವನ್ನೂ ಅಂಟಿಸಬೇಕಿತ್ತು. ಆದರೆ, ಈ ಬಾರಿ ಫೆÇೀಟೋ ಸೇರಿದಂತೆ ವಿದ್ಯಾರ್ಥಿಯ ಎಲ್ಲ ಅಗತ್ಯ ಮಾಹಿತಿ ಪೂರ್ವ ಮುದ್ರಣದೊಂದಿಗೆ ನೀಡಲು ಮಂಡಳಿ ಸಿದ್ಧತೆ ನಡೆಸಿದೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ತಮ್ಮ ಕೈಗೆ ಬಂದ ಒಎಂಆರ್ ಶೀಟ್ ನಲ್ಲಿ ಮುದ್ರಿತವಾಗಿರುವ ಹೆಸರು, ನೋಂದಣಿ ಸಂಖ್ಯೆ, ಪೆÇೀಟೋ ಹಾಗೂ ಇತರೆ ವಿವರಗಳು ಎಲ್ಲವೂ ತಮ್ಮದೇ ಎಂಬುದನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಂಡ ನಂತರ ಸಹಿ ಮಾಡುವುದು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಹಾಗೂ ಭದ್ರತಾ ದೃಷ್ಟಿಯಿಂದ ಮಂಡಳಿಯು ಈ ಬಾರಿ ಪ್ರತಿ ಒಎಂಆರ್ ಹಾಳೆಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಭಾಷಾ ವಿಷಯಗಳು ಹಾಗೂ ಕೋರ್ ಸಬ್ಜೆಕ್ಟ್ ವಿಷಯಗಳ ಮೇಲೆ ಕೇವಲ ಎರಡೇ ಪರೀಕ್ಷೆ ನಡೆಸಲಾಗುತ್ತಿದೆ. ಮೂರು ಭಾಷಾ ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಕೆ, ಇನ್ನುಳಿದ ಮೂರು ಕೋರ್ ಸಬ್ಜೆಕ್ಟ್ ಗಳಿಗೆ ಮತ್ತೊಂದು ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ ತಲಾ 40 ಅಂಕಗಳ ಪ್ರಶ್ನೆಗಳಂತೆ ಒಟ್ಟು ಮೂರು ವಿಷಯಗಳಿಂದ 120 ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗಿರುತ್ತವೆ. ಈ ರೀತಿ ಒಂದೇ ಬಾರಿ ಮೂರು ವಿಷಯಗಳಿಗೆ ವಿದ್ಯಾರ್ಥಿಗಳು ಉತ್ತರ ಗುರುತಿಸಬೇಕಿರುವುದರಿಂದ ಗೊಂದಲ ನಿವಾರಿಸುವ ಉದ್ದೇಶದಿಂದ ಒಎಂಆರ್ ಶೀಟ್ ನಲ್ಲಿ ವಿಭಿನ್ನ ಬಣ್ಣಗಳನ್ನು ಬಳಸಿಕೊಳ್ಳಲಾಗಿದೆ.
ಪ್ರತಿ ವಿಷಯಕ್ಕೂ ಬೇರೆ ಬೇರೆ ಬಣ್ಣದ ಉತ್ತರ ಪತ್ರಿಕಾ ಪ್ರತಿಗಳನ್ನು ಒಎಂಆರ್‍ನಲ್ಲಿ ನೀಡಲಾಗಿರುತ್ತದೆ. ಶಿಕ್ಷಣ ಇಲಾಧಿಕಾರಿಗಳ ಪ್ರಕಾರ, ಗಣಿತ ಪತ್ರಿಕೆಗೆ ಗುಲಾಬಿ, ವಿಜ್ಞಾನಕ್ಕೆ ಕಿತ್ತಳೆ ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ ಹಸಿರು ಬಣ್ಣ ಬಳಸಲಾಗಿರುತ್ತದೆ. ಭಾಷಾ ವಿಷಯಗಳಿಗೂ ಇದೇ ರೀತಿ ಪ್ರಥಮ ಭಾಷೆಗೆ ಗುಲಾಬಿ, ದ್ವಿತೀಯ ಭಾಷೆಗೆ ಕಿತ್ತಳೆ ಹಾಗೂ ಮೂರನೇ ಭಾಷಾ ವಿಷಯಕ್ಕೆ ಹಸಿರು ಬಣ್ಣವನ್ನು ಬಳಸಲಾಗಿರುತ್ತದೆ ಎನ್ನಲಾಗಿದೆ.
ಇದೇ ಜುಲೈ 19 ಹಾಗೂ 22 ರಂದು ಎರಡು ದಿನಗಳಲ್ಲಿ ಈ ಬಾರಿಯ ಪರೀಕ್ಷೆ ನಡೆಯಲಿದ್ದು, ಪ್ರತಿ ದಿನದ ಪರೀಕ್ಷೆಗೆ ಮೂರು ಗಂಟೆಯ ಸಮಯಾವಕಾಶ ಇದೆ. ಮೊದಲ ದಿನದ ಕೋರ್ ಸಬ್ಜೆಕ್ಟ್ ಗಳ ಪರೀಕ್ಷೆಯಲ್ಲಿ 1 ರಿಂದ 40 ರವರೆಗಿನ ಪ್ರಶ್ನೆಗಳು ಗಣಿತ, 41 ರಿಂದ 80ರವರೆಗಿನ ಪ್ರಶ್ನೆಗಳು ವಿಜ್ಞಾನ ಹಾಗೂ 81 ರಿಂದ 120 ರವರೆಗಿನ ಪ್ರಶ್ನೆಗಳು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿರುತ್ತವೆ. ಎರಡನೇ ದಿನದ ಭಾಷಾ ವಿಷಯದ ಪರೀಕ್ಷೆಯಲ್ಲಿ 1 ರಿಂದ 40 ರವರೆಗಿನ ಪ್ರಶ್ನೆಗಳು ಪ್ರಥಮ ಭಾಷೆ, 41 ರಿಂದ 80 ರವರೆಗಿನ ಪ್ರಶ್ನೆಗಳು ದ್ವಿತೀಯ ಭಾಷೆ ಹಾಗೂ 81 ರಿಂದ 120ರವರೆಗಿನ ಪ್ರಶ್ನೆಗಳು ತೃತೀಯ ಭಾಷೆಗೆ ಸಂಬಂಧಿಸಿರುತ್ತವೆ ಎಂದು ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ತಿಳಿಸಲಾಗಿದೆ.
0 comments:
Post a Comment