ಬಂಟ್ವಾಳ, ಜುಲೈ 05, 2021 (ಕರಾವಳಿ ಟೈಮ್ಸ್) : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೊಸ ಉತ್ಸಾಹ ನೀಡುವ ನಿಟ್ಟಿನಲ್ಲಿ ಯುವಕರಿಗೆ ಆದ್ಯತೆ ನೀಡುವಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 'ಕೈ' ರಾಜ್ಯಭಾರ ಮಾಡಿಯೇ ಸಿದ್ದ ಎಂಬ ದಿಸೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಪಕ್ಷದ ಹಿರಿಯ ಕಿರಿಯ ಮುಖಂಡರನ್ನು ಜೊತೆಗೂಡಿ ಕಾರ್ಯವಿಧಾನ ರೂಪಿಸುತ್ತಿದ್ದಾರೆ.
ಡಿಕೆಶಿ ಅವರ ಸಿದ್ದಾಂತವನ್ನು ಇತ್ತ ತನ್ನ ಕ್ಷೇತ್ರದಲ್ಲೂ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಅವರು ಹೆಜ್ಜೆ ಇಟ್ಟಿದ್ದು ತನ್ನ ಕ್ಷೇತ್ರದ ಮುಡಿಪು ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಪಕ್ಷ ಸಂಘಟನೆಯ ಮಹತ್ವದ ಹುದ್ದೆಯಾಗಿರುವ ಪಕ್ಷದ "ವಕ್ತಾರ (ಸ್ಪೋಕ್ ಪರ್ಸನ್)" ಜವಾಬ್ದಾರಿಯನ್ನು ಪಾದರಸ ಚಲನೆಯ ಯುವ ಮುಖಂಡ ಅಬ್ದುಲ್ ರಝಾಕ್ ಕುಕ್ಕಾಜೆ ಅವರ ಹೆಗಲಿಗೆ ಹಾಕಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ರಝಾಕ್ ಕುಕ್ಕಾಜೆ ಅವರು ಈ ಹುದ್ದೆಗೆ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಕ್ಷೇತ್ರ ಹಾಗೂ ಬ್ಲಾಕ್ ಮಟ್ಟದಲ್ಲಿ ಕೇಳಿ ಬರುತ್ತಿದೆ.
ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಿರಿ ವಯಸ್ಸಿನಲ್ಲೇ ರಾಜಕೀಯ ರಂಗ ಪ್ರವೇಶಿಸಿರುವ ರಝಾಕ್ ಅವರು ಇರಾ ಗ್ರಾಮ ಪಂಚಾಯತಿಗೆ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆ ಆಗಿದ್ದು, ನಾಲ್ಕೂ ಬಾರಿಯೂ ಗರಿಷ್ಠ ಅಂತರದ ವಿಜಯ ಪಡೆದು ವಾರ್ಡಿನ ಮತದಾರರ ಸಂಪೂರ್ಣ ಮನಗೆಲ್ಲುವಲ್ಲಿ ಸಫಲರಾಗಿದ್ದಾರೆ. ಎರಡು ಬಾರಿ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿ ಸುಮಾರು ಏಳೂವರೆ ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿದ್ದುಕೊಂಡು ಹಲವು ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದ ಶಾಸಕ ಯುಟಿ ಖಾದರ್ ಅವರ ಸಹಕಾರದೊಂದಿಗೆ ಯಶಸ್ವಿಯಾಗಿ ಕೈಗೊಂಡು ಪಂಚಾಯತನ್ನು ಮಾದರಿ ಪಂಚಾಯತ್ ಆಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ ಇರಾ ಗ್ರಾಮ ಪಂಚಾಯತಿಗೆ ಅಭಿವೃದ್ದಿಗಾಗಿ ಪ್ರಶಸ್ತಿಯ ಗರಿಯನ್ನೂ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ರಝಾಕ್ ಕುಕ್ಕಾಜೆ ಗ್ರಾಮ ಪಂಚಾಯತ್ ಸದಸ್ಯರ ರಾಜ್ಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ ರಾಜಕೀಯ, ಸಾಮಾಜಿಕ, ಕ್ರೀಡೆ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಜನರಿಗಾಗಿ ತಮ್ಮ ಸೇವೆಯನ್ನು ನಿರ್ವಹಿಸಿದ್ದಾರೆ. ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಪದಾಧಿಕಾರಿಯಾಗಿರುವ ರಝಾಕ್ ಕುಕ್ಕಾಜೆ ಸ್ಥಳೀಯವಾಗಿ ಕುಕ್ಕಾಜೆಯಲ್ಲಿ ನವಯುಗ ಸ್ಪೋಟ್ಸ್ ಕ್ಲಬ್ ಅನ್ನು ತಾವೇ ಸ್ಥಾಪಿಸಿ ಅದರ ಸ್ಥಾಪಕಾಧ್ಯಕ್ಷರಾಗಿ ಸ್ವತಃ ಕ್ರೀಡಾಪಟುವಾಗಿ ಸ್ಥಳೀಯ ಯುವಕರಿಗೆ ಕಬಡ್ಡಿ ಸಹಿತ ವಿವಿಧ ಕ್ರೀಡಾ ಪ್ರೋತ್ಸಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯ ಸರಕಾರಿ ಪ್ರೌಢಶಾಲಾ ಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶೈಕ್ಷಣಿಕ ಸೇವೆ ಸಲ್ಲಿಸಿದ್ದು, ಕುಕ್ಕಾಜೆ ಮಸೀದಿ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಧಾರ್ಮಿಕ ಸೇವೆ ಸಲ್ಲಿಸಿರುವ ಇವರು ಕುಕ್ಕಾಜೆ ಶರಫುಲ್ ಇಸ್ಲಾಂ ಸಮಿತಿಯಲ್ಲಿ ಮೂರು ವರ್ಷ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಇದರ ಉಪಾಧ್ಯಕ್ಷರಾಗಿ ಸಾಂಸ್ಕೃತಿಕ ಕಲೆಯಾಗಿರುವ ದಫ್ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದಲ್ಲದೆ ಕುಕ್ಕಾಜೆಯಲ್ಲಿ ಫ್ರೆಂಡ್ಸ್ ಎಸೋಸಿಯೇಶನ್ ಹೆಸರಿನಲ್ಲಿ ಸ್ಥಳೀಯವಾಗಿ ದಫ್ ಸಾಂಸ್ಕೃತಿಕ ಕಲೆಯ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ ಸಾಂಸ್ಕೃತಿಕ ಕಲೆಯ ಪೋಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜ್ಯಮಟ್ಟದ ಕ್ರೀಡಾ ವೀಕ್ಷಕ ವಿವರಣೆಕಾರ ಹಾಗೂ ಕಾರ್ಯಕ್ರಮ ನಿರೂಪಣೆಯ ಕೌಶಲ್ಯ ಹೊಂದಿರುವ ಇವರು ಬಹುಮುಖ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಿದ್ದಲ್ಲದೆ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ಇದೀಗ ಇವರ ಬಹುಮುಖ ಸೇವೆ ಹಾಗೂ ಪಕ್ಷದ ಸಂಘಟನೆಗಾಗಿ ಪಾದರಸ ಚಲನೆಯ ಇವರ ಕಾರ್ಯವೈಖರಿ ಮನಗಂಡ ಶಾಸಕ ಯು ಟಿ ಖಾದರ್ ಅವರು ಮುಂದಿನ ದಿನಗಳಲ್ಲಿ ಕ್ಷೇತ್ರಗಳಲ್ಲಿ ಇನ್ನಷ್ಟು ಪಕ್ಷ ಸಂಘಟನೆಯ ಉದ್ದೇಶದಿಂದ ಬ್ಲಾಕ್ ಮಟ್ಟದಲ್ಲಿ ಉನ್ನತ ಹುದ್ದೆಯಾಗಿರುವ ಸ್ಪೋಕ್ಸ್ ಪರ್ಸನ್ ಪೋಸ್ಟ್ ಗೆ ರಝಾಕ್ ಕುಕ್ಕಾಜೆ ಅವರನ್ನು ನೇಮಕಗೊಳಿಸಲು ವಿಶೇಷ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
0 comments:
Post a Comment