ಬಂಟ್ವಾಳ, ಜುಲೈ 15, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಗುರುವಾರ ಬೆಳಿಗ್ಗಿನಿಂದ ರಾತ್ರಿವರೆಗೂ ಬಿರುಸಿನಿಂದ ಕೂಡಿದ ಮಳೆ ಸುರಿಯುತ್ತಿದೆ. ಗಾಳಿಯ ಪ್ರಮಾಣದಲ್ಲೂ ತೀವ್ರತೆ ಕಾಣುತ್ತಿದ್ದು, ತಾಲೂಕಿನ ಜೀವನದಿ ಗುರುವಾರ ಸಂಜೆ ವೇಳೆಗೆ ನೇತ್ರಾವತಿ 7 ಮೀಟರ್ ಮೀರಿ ಹರಿಯುತ್ತಿದೆ. 8.5 ಇಲ್ಲಿನ ನದಿಯ ಅಪಾಯದ ಮಟ್ಟ ಆಗಿದ್ದು, ಮಳೆ ಬಿರುಸು ಇದೇ ರೀತಿ ಮುಂದುವರಿದರೆ ತಾಲೂಕಿನ ಬಂಟ್ವಾಳ ಕೆಳಗಿನಪೇಟೆ, ಕಂಚಿಕಾರಪೇಟೆ, ಬಡ್ಡಕಟ್ಟೆ, ನಾವೂರು, ಅಗ್ರಹಾರ, ಅಜಿಲಮೊಗರು, ಸರಪಾಡಿ, ಪಾಣೆಮಂಗಳೂರು, ಆಲಡ್ಕ, ಗೂಡಿನಬಳಿ, ಅಕ್ಕರಂಗಡಿ, ಬೋಗೋಡಿ ಮೊದಲಾದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ತಾಲೂಕಿನ ತಗ್ಗು ಪ್ರದೇಶಗಳ ಜನ ತಮ್ಮ ಮನೆ-ಮಠ, ಸರಕು-ಸರಂಜಾಮು, ಸಾಕು ಪ್ರಾಣಿಗಳ ಬಗ್ಗೆ ಸದಾ ಜಾಗರೂಕರಾಗಿರುವಂತೆ ತಾಲೂಕಾಡಳಿತ ಎಚ್ಚರಿಸಿದ್ದು, ಅಪಾಯದ ಪರಿಸ್ಥಿತಿ ಕಂಡು ಬಂದರೆ ಮಧ್ಯರಾತ್ರಿಯಾದರೂ ಕಂದಾಯ ಇಲಾಖೆಯ ತುರ್ತು ತಂಡ ಸದಾ ಸನ್ನದ್ದ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ತಕ್ಷಣ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಅಭಯ ನೀಡಿದ್ದಾರೆ.
ತಾಲೂಕಿನಲ್ಲಿ ಮಳೆ ಬಿರುಸುಗೊಂಡಂತೆ ವಿವಿಧೆಡೆ ಮಳೆ ಹಾನಿ ಪ್ರಕರಣಗಳೂ ಹೆಚ್ಚಾಗಿ ವರದಿಯಾಗುತ್ತಿದೆ. ತಾಲೂಕಿನ ಶಂಬೂರು ಗ್ರಾಮದ ಇರಾಂತಬೆಟ್ಟು ಎಂಬಲ್ಲಿ ತೋಡು ತುಂಬಿ ಹರಿದು ಉಂಟಾದ ಕೃತಕ ನೆರೆಯಿಂದ ಶೀನಶೆಟ್ಟಿ ಇವರ ಅಡಿಕೆ ತೋಟಕ್ಕೆ ನೀರು ನುಗ್ಗಿದ್ದು, ಹಾನಿ ಸಂಭವಿಸಿದೆ, ವಿಟ್ಲ ಕಸಬಾ ಗ್ರಾಮದಲ್ಲಿ ವಿ ಕೆ ಅಬ್ಬಾಸ್ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಪುದು ಗ್ರಾಮದ ಸುಜೀರು ಕೊಡಂಗೆ ನಿವಾಸಿ ಲಕ್ಷ್ಮಣ ಪೂಜಾರಿ ಬಿನ್ ಉಗ್ಗಪ್ಪ ಪೂಜಾರಿ ಅವರ ಮನೆಗೆ ಸಮೀಪದ ಗುಡ್ಡ ಜರಿದು ಹಾನಿ ಸಂಭವಿಸಿದೆ. ಬಾಳೆಪುಣಿ ಗ್ರಾಮದ ಕಾಣತ್ತೂರು ನಿವಾಸಿ ವಿಶ್ವನಾಥ ಬಿನ್ ಕರಿಯ ಅವರ ತೋಟಕ್ಕೆ ಹಾನಿ ಸಂಭವಿಸಿದೆ. ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಮಹಮ್ಮದ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ನಾವೂರು ಗ್ರಾಮದ ಸೆಬಾಸ್ಟಿಯನ್ ಅಲ್ಬುಕರ್ಕ್ ಅವರ ಮನೆ ಕುಸಿದು ಬಿದ್ದು ತೀವ್ರ ನಷ್ಟ ಸಂಭವಿಸಿರುತ್ತದೆ. ಪೆರಾಜೆ ಗ್ರಾಮದ ಏನಾಜೆ ನಿವಾಸಿ ಕಾಂತಪ್ಪ ಕುಲಾಲ್ ಬಿನ್ ಕೃಷ್ಣಪ್ಪ ಕುಲಾಲ್ ಅವರ ಮನೆಗೆ ಭಾಗಶಃ ಹಾನಿಯಾಗಿರುತ್ತದೆ.
0 comments:
Post a Comment