ಬಂಟ್ವಾಳ, ಜುಲೈ 20, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಬಿರುಸು ಕಡಿಮೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದ್ದರೂ ಮಂಗಳವಾರವೂ ಮಳೆ ಹಾನಿ ಪ್ರಕರಣಗಳು ವ್ಯಾಪಕ ವರದಿಯಾಗಿದೆ.
ಸಜಿಪನಡು ಗ್ರಾಮ ಕುಂಟಾಲಗುಡ್ಡೆ ನಿವಾಸಿ ರಾಮಚಂದ್ರ ಬಿನ್ ಸುಂದರ ಪೂಜಾರಿ ಅವರ ವಾಸ್ತವ್ಯದ ಕಚ್ಚಾ ಮನೆ ತೀವ್ರ ಹಾನಿಯಾಗಿದೆ. ಪುದು ಗ್ರಾಮದ ತೇವು ನಿವಾಸಿ ಪರಮೇಶ್ವರ ಮೂಲ್ಯ ಅವರ ಮನೆ ಹಾನಿಯಾಗಿದೆ. ಮಾಣಿ ಗ್ರಾಮದ ಲಕ್ಕಪ್ಪಕೋಡಿ ನಿವಾಸಿ ವಸಂತ ಪೂದನ್ನಾಯ ಬಿನ್ ವೆಂಕಟರಮಣ ಪುದನ್ನಾಯ ಅವರ ವಾಸ್ತವ್ಯ ಇಲ್ಲದ ಮನೆ ಪೂರ್ಣ ಹಾನಿಗೊಂಡಿದೆ. ಬಾಳ್ತಿಲ ಗ್ರಾಮದ ಜೀವೆ ನಿವಾಸಿ ರಾಧಾಕೃಷ್ಣ ನಾಯಕ್ ಬಿನ್ ಕೊಗ್ಗ ನಾಯಕ್ ಅವರ ಅಡಿಕೆ ತೋಟದಲ್ಲಿ ಮಳೆ ನೀರು ಹರಿದು ಹೋಗದೆ ತೋಟದಲ್ಲಿ ಸಂಗ್ರಹಗೊಂಡು ತೋಟಕ್ಕೆ ಹಾನಿ ಸಂಭವಿಸಿದೆ.
ಮಂಚಿ ಗ್ರಾಮದ ನೊಳ ನಿವಾಸಿ ಝುಬೈದ ಕೋಂ ಇಸ್ಮಾಲಿ ಅವರ ಮನೆ ಪೂರ್ತಿ ಕುಸಿದಿರುತ್ತದೆ. ಅಪಾಯದ ಮುನ್ಸೂಚನೆ ಅರಿತ ಅವರು ಮುಂಗಡವಾಗಿ ಬಾಡಿಗೆ ಮನೆಯಲ್ಲಿ ನೆಲೆಸಿರುತ್ತಾರೆ. ಶಂಭೂರು ಗ್ರಾಮದ ಕೆದುಕೊಡಿ ನಿವಾಸಿ ರಮೇಶ್ ಅವರ ಬಚ್ಚಲು ಮನೆಯ ಮಾಡು ಕುಸಿದು ಬಿದ್ದಿದೆ. ಮೂಡನಡುಗೋಡು ಗ್ರಾಮದ ದಡ್ಡಲಕಾಡು ನಿವಾಸಿ ಓಬಯ್ಯ ಮೂಲ್ಯ ಅವರ ಮನೆಗೆ ಮರ ಬಿದ್ದು ಪಕ್ಕಾ ಮನೆ ಭಾಗಶಃ ಹಾನಿಯಾಗಿದೆ ಎಂದು ತಾಲೂಕು ಕಛೇರಿಯ ಪ್ರಾಕೃತಿಕ ವಿಕೋಪ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
0 comments:
Post a Comment