ಬೆಂಗಳೂರು, ಜುಲೈ 09, 2021 (ಕರಾವಳಿ ಟೈಮ್ಸ್) : ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.
ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಪೋರ್ಟಲ್ (SATS) ನಲ್ಲಿ ಇದನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಜುಲೈ 10 ಅಂದರೆ ನಾಳೆಯಿಂದ ಪೋರ್ಟಲ್ ಲಿಂಕ್ ಸಕ್ರಿಯವಾಗಲಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು https://sts.karnataka.gov.in/SATSPU/ ಈ ಲಿಂಕ್ ಮೂಲಕ ಇದನ್ನು ವೀಕ್ಷಿಸಬಹುದು. ಅಂಕಗಳ ವೀಕ್ಷಣೆ ನಂತರ ವಿದ್ಯಾರ್ಥಿಗಳು ತಮ್ಮ ಅಂಕಗಳಲ್ಲಿ ಸಂದೇಹ ಕಂಡು ಬಂದರೆ ಅಥವಾ ಯಾವುದೇ ಲೋಪ ದೋಷಗಳಿದ್ದಲ್ಲಿ ತಮ್ಮ ಕಾಲೇಜು ಪ್ರಾಂಶುಪಾಲರಿಗೆ ಜುಲೈ 12ರೊಳಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಕಾಲೇಜು ಪ್ರಾಂಶುಪಾಲರು ದಾಖಲೆ ಮಾಡಿಕೊಂಡ ಅಂಕಗಳು ವಿದ್ಯಾರ್ಥಿಯ ಅಂತಿಮ ಅಂಕವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ (SATS) ಪೋರ್ಟಲ್ ನಲ್ಲಿ ವಿದ್ಯಾರ್ಥಿಯು ತಮ್ಮ ಕಾಲೇಜಿನ ದಾಖಲು ಸಂಖ್ಯೆಯನ್ನು ದಾಖಲು ಮಾಡಿಕೊಂಡು ತಮ್ಮ ಅಂಕ ವೀಕ್ಷಿಸಬಹುದು.
ವಿದ್ಯಾರ್ಥಿಗಳ ಸ್ಯಾಟ್ಸ್ ನಂಬರ್ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಅವರ ವರ್ಗಾವಣೆ ಪ್ರಮಾಣ ಪತ್ರದಲ್ಲಿ ನಮೂದಿರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
0 comments:
Post a Comment