ಬೆಂಗಳೂರು, ಜುಲೈ 21, 2021 (ಕರಾವಳಿ ಟೈಮ್ಸ್) : ಈ ಬಾರಿ ಕೊರೋನಾ ಹಿನ್ನಲೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದು, ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಫಲಿತಾಂಶದ ಆಧಾರದಲ್ಲಿ ಪ್ರಕಟಿಸಲಾಗಿರುವ ಸೆಕೆಂಡ್ ಪಿಯು ಫಲಿತಾಂಶದಲ್ಲಿ ತೃಪ್ತರಾಗದ ವಿದ್ಯಾರ್ಥಿಗಳು ಜುಲೈ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ಅವರು, ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಜುಲೈ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಂತಹ ವಿದ್ಯಾರ್ಥಿಗಳು ತಮ್ಮ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬಹುದು. ಫಲಿತಾಂಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಫಲಿತಾಂಶ ರದ್ದು ಪಡಿಸಿಕೊಂಡ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದವರು ಹೇಳಿದ್ದಾರೆ.
ಸಲ್ಲಿಕೆಯಾದ ಅರ್ಜಿಗಳನ್ನು ಪ್ರಾಂಶುಪಾಲರು ಸ್ಟೂಡೆಂಟ್ಸ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಪೋರ್ಟಲ್ ನಲ್ಲಿ ದಾಖಲಿಸಲು ಜುಲೈ 30 ಕೊನೆಯ ದಿನವಾಗಿದ್ದು, ಜುಲೈ 31ರೊಳಗೆ ಅರ್ಜಿಗಳನ್ನು ಕಡ್ಡಾಯವಾಗಿ ತಮ್ಮ ಜಿಲ್ಲಾ ಉಪನಿರ್ದೇಶಕ ಕಚೇರಿಗೆ ಸಲ್ಲಿಸಬೇಕು. ಉಪ ನಿರ್ದೇಶಕರು ಆಗಸ್ಟ್ 2ರೊಳಗೆ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.
ಇದೇ ವೇಳೆ ಪಿಯು ಪರೀಕ್ಷಾ ಶುಲ್ಕ ಮರುಪಾವತಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸುವ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪರೀಕ್ಷೆ ರದ್ದಾದರೂ ಫಲಿತಾಂಶ ನೀಡಲು ಇಲಾಖೆಗೆ ಹಾಲಿ ಸಂಗ್ರಹಿಸಿರುವ ಪರೀಕ್ಷಾ ಶುಲ್ಕದ ಮೊತ್ತಕ್ಕಿಂತ ಹೆಚ್ಚು ವೆಚ್ಚ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆಗಿರುವ ಹಿನ್ನಲೆಯಲ್ಲಿ ಪರೀಕ್ಷಾ ಶುಲ್ಕ ವಾಪಸ್ ನೀಡುವುದಿಲ್ಲ ಎಂದರು.
ಅದೇ ರೀತಿ ದ್ವಿತೀಯ ಪಿಯುಸಿ ತೇರ್ಗಡೆಗೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಪದವಿ ಪ್ರವೇಶಕ್ಕೆ ಅವಕಾಶವಾಗುವಂತೆ ಪದವಿ ಕಾಲೇಜುಗಳಲ್ಲಿನ ಸೀಟುಗಳ ಸಂಖ್ಯೆ ಹೆಚ್ಚಿಸಲು ಉನ್ನತ ಶಿಕ್ಷಣ ಇಲಾಖೆ ಕ್ರಮ ವಹಿಸಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಈ ಬಾರಿ ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳನ್ನೂ ಪಾಸು ಮಾಡಿರುವುದರಿಂದ ಉನ್ನತ ಶಿಕ್ಷಣ ಪ್ರವೇಶಕ್ಕೆ ಸಹಜವಾಗಿಯೇ ಸಂಖ್ಯೆ ಹೆಚ್ಚಾಗಲಿದೆ.
ಈ ಸಂಬಂಧ ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಚಿವರಾಗಿರು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಪಿಯು ಪಾಸಾದ ಎಲ್ಲಾ ಮಕ್ಕಳಿಗೂ ಪದವಿ ಪ್ರವೇಶಕ್ಕೆ ಅಗತ್ಯದಷ್ಟು ಸೀಟು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
0 comments:
Post a Comment