ಬಂಟ್ವಾಳ, ಜುಲೈ 03, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನಲ್ಲಿ ಕಳೆದ ಹಲವು ಸಮಯಗಳಿಂದ ಕೆಟ್ಟು ಹೋಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಕೊನೆಗೂ ಕಾಯಕಲ್ಪ ಒದಗಿ ಬಂದಿದೆ. ಇಲ್ಲಿನ ಹೆದ್ದಾರಿ ಮಧ್ಯೆ ಭೂಮಿ ಅಡಿಯಲ್ಲಿ ಹಾದು ಹೋಗಿದ್ದ ಪೈಪ್ ಲೈನ್ ಒಡೆದು ಹೋಗಿದ್ದ ಪರಿಣಾಮ ಮೆಲ್ಕಾರ್ ಹಾಗೂ ರೆಂಗೇಲು ಪರಿಸರಕ್ಕೆ ಕಳೆದ ಹಲವು ಸಮಯಗಳಿಂದ ಕುಡಿಯವ ನೀರು ಸರಬರಾಜು ವ್ಯತ್ಯಯಗೊಂಡಿತ್ತು. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ಪುರಸಭಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಿಪೇರಿಗಾಗಿ ಆಗ್ರಹಿಸಿದ್ದರು.
ಇದೀಗ ನೂತನವಾಗಿ ಆಡಳಿತಕ್ಕೆ ಬಂದ ಪುರಸಭಾಡಳಿತಕ್ಕೂ ಇಲ್ಲಿನ ನಾಗರಿಕರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರು ಈ ಬಗ್ಗೆ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಅವರ ಗಮನಕ್ಕೂ ತಂದಿದ್ದರಲ್ಲದೆ ಖುದ್ದು ಸ್ಥಳಕ್ಕೆ ಕರೆಸಿ ಸಮಸ್ಯೆ ಆಳದ ಬಗ್ಗೆ ವಿವರಿಸಿದ್ದರು. ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಜೊತೆ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಅಧ್ಯಕ್ಷ ಶರೀಫ್ ಅವರು ಈ ಬಗ್ಗೆ ಶೀಘ್ರ ಪರಿಹಾರಕ್ಕೆ ಪುರಸಭಾ ಗುತ್ತಿಗೆದಾರ ಲತೀಫ್ ದಾಸರಗುಡ್ಡೆ ಮತ್ತು ಪ್ಲಂಬರ್ ಗಳಾದ ಇಬ್ರಾಹಿಂ ಪಲ್ಲಮಜಲು ಹಾಗೂ ಗಿರಿಧರ ಅವರಿಗೆ ಈ ಬಗ್ಗೆ ಕಾಮಗಾರಿ ನಡೆಸಿ ಸರಿಪಡಿಸುವಂತೆ ಸೂಚಿಸಿದ್ದರು.
ಪುರಸಭಾಧ್ಯಕ್ಷ ಹಾಗೂ ಕೌನ್ಸಿಲರ್ ಸೂಚನೆ ಮೇರೆಗೆ ಹೆದ್ದಾರಿ ಮಧ್ಯೆ ಹುದುಗಿದ್ದ ಈ ಕ್ಲಿಷ್ಟಕರ ಪೈಪ್ ಲೈನ್ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ಪರಿಸರಕ್ಕೆ ನೀರು ಸರಬರಾಜು ಕಾರ್ಯ ಸಮರ್ಪಕವಾಗಿ ಆಗುತ್ತಿದೆ. ಅಲ್ಲದೆ ಹೆದ್ದಾರಿ ಮಧ್ಯೆ ಕಾಮಗಾರಿಯಿಂದಾಗಿ ಉಂಟಾಗಿರುವ ಹೊಂಡಕ್ಕೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಕಾಂಕ್ರಿಟ್ ಸ್ಲ್ಯಾಬ್‍ಗಳ ನಿರ್ಮಾಣ ಆಗುತ್ತಿದ್ದು ಶೀಘ್ರದಲ್ಲೇ ಅದೂ ಕೂಡಾ ಸಮಪರ್ಕವಾಗಿ ಆಗಲಿದೆ ಎಂದು ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ತಿಳಿಸಿದ್ದಾರೆ.
0 comments:
Post a Comment