ಚರಂಡಿ ಅವ್ಯವಸ್ಥೆಯಿಂದ ಉಂಟಾಗುವ ಕೃತಕ ನೆರೆ ಅನಾಹುತಕ್ಕೆ ಆಹ್ವಾನ : ಸ್ಥಳೀಯರ ಆಕ್ರೋಶ
ಬಂಟ್ವಾಳ, ಜುಲೈ 09, 2021 (ಕರಾವಳಿ ಟೈಮ್ಸ್) : ಮಾಣಿ-ಮೈಸೂರು ಹೆದ್ದಾರಿಯ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕರೆಬೆಟ್ಟು ಜಂಕ್ಷನ್ನಿನಲ್ಲಿ ಹೆದ್ದಾರಿ ಇಲಾಖಾಧಿಕಾರಿಗಳ ನಿರ್ಲಕ್ಷ್ಯ ಇದೀಗ ಸ್ಥಳೀಯರ ನಿದ್ದೆಗೆಡಿಸಿದೆ. ಮಳೆಗಾಲದಲ್ಲಿ ಈ ಪ್ರದೇಶ ಅಕ್ಷರಶಃ ನದಿಯಾಗಿ ಪರಿವರ್ತನೆಯಾಗುತ್ತಿದ್ದು, ಹೆದ್ದಾರಿ ವಾಹನ ಸವಾರರು ಹಾಗೂ ಸ್ಥಳೀಯರು ನರಕಸದೃಶ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇಲ್ಲಿನ ಹೆದ್ದಾರಿಯ ಎರಡೂ ಬದಿಯ ಚರಂಡಿ ಅಸಮರ್ಪಕತೆಯೇ ಎಲ್ಲಾ ಅವಾಂತರಗಳಿಗೂ ಕಾರಣವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಕಳೆದ ಕೆಲ ವರ್ಷಗಳಿಂದ ಈ ಜಂಕ್ಷನ್ನಿನಲ್ಲಿ ಈ ಗಂಭೀರ ಸಮಸ್ಯೆ ಜನರ ತಾಳ್ಮೆ ಪರೀಕ್ಷಿಸುತ್ತಿದೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು, ಲೋಕೋಪಯೋಗಿ ಇಲಾಖಾಧಿಕಾರಿಗಳು ಹಾಗೂ ಹೆದ್ದಾರಿ ಇಲಾಖಾಧಿಕಾರಿಗಳ ಸಹಿತ ಸಂಬಂಧಪಟ್ಟ ಎಲ್ಲಾ ಇಲಾಖಾಧಿಕಾರಿಗಳು, ಶಾಸಕ-ಸಂಸದರಾದಿಯಾಗಿ ಎಲ್ಲ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಫಲಿತಾಂಶ ಮಾತ್ರ ಶೂನ್ಯ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
ಜೋರಾಗಿ ಮಳೆ ಬಂದರೆ ನೀರು ಸಮರ್ಪಕವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಮಳೆ ನೀರು ಸಂಪೂರ್ಣವಾಗಿ ರಭಸವಾಗಿ ಹೆದ್ದಾರಿಯಲ್ಲೇ ಹರಿಯುತ್ತದೆ. ಈ ಸಂದರ್ಭ ಹೆದ್ದಾರಿ ಪೂರ್ತಿ ನದಿಯಂತಾಗುತ್ತಿದ್ದು, ರಸ್ತೆ ಯಾವುದು, ಫೂಟ್ ಪಾತ್ ಯಾವುದು ಎನ್ನುವುದೂ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಗೊತ್ತಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯವಾಗಿ ಜನರಿಗೆ ಆತಂಕ ಹಾಗೂ ಅಪಾಯದ ಕರೆಗಂಟೆ ಭಾರಿಸುತ್ತಿದೆ.
ಗಂಭೀರ ಅನಾಹುತಗಳು ಸಂಭವಿಸುವ ಮುಂಚಿತವಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಇಲ್ಲಿನ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿರುವ ಸ್ಥಳೀಯ ಸಾರ್ವಜನಿಕರು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ, ಅಧಿಕಾರಿಗಳ ಕಛೇರಿ ಮುತ್ತಿಗೆಯಂತಹ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
0 comments:
Post a Comment