ದುಬೈ, ಜುಲೈ 26, 2021 (ಕರಾವಳಿ ಟೈಮ್ಸ್) : ಆಟಗಾರರಿಗೆ ಕೋವಿಡ್ ಸೋಂಕು ಬಾಧಿಸಿದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ 2021ರ ಐಪಿಎಲ್ ಚುಟುಕು ಕ್ರಿಕೆಟ್ ಸರಣಿ ಇದೀಗ ಮತ್ತೆ ಯುಎಇ ರಾಷ್ಟ್ರದಲ್ಲಿ ಆರಂಭಗೊಳ್ಳಲು ಮುಹೂರ್ತ ಫಿಕ್ಸ್ ಆಗಿದೆ.
ಸೆಪ್ಟೆಂಬರ್ 19 ರಂದು ಐಪಿಎಲ್ ಕೂಟದ ಸೆಕೆಂಡ್ ಇನ್ನಿಂಗ್ಸಿನ ಮೊದಲ ಮೊದಲ ಪಂದ್ಯ ನಡೆಯಲಿದ್ದು, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸಾಗಿಬರಲಿದೆ ಎಂದು ಹೊಸ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
14ನೇ ಆವೃತ್ತಿಯ ಐಪಿಎಲ್‍ನ 29 ಪಂದ್ಯಗಳು ನಡೆದ ಬಳಿಕ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಮೇ 4 ರಂದು ಐಪಿಎಲ್-2021 ಮುಂದೂಡಲಾಗಿತ್ತು. ಬಳಿಕ ಬಿಸಿಸಿಐ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಇನ್ನುಳಿದ 31 ಪಂದ್ಯಗಳನ್ನು ದುಬೈ, ಅಬುದಾಬಿ ಮತ್ತು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿತ್ತು.
ಇದೀಗ ಹೊಸ ವೇಳಾಪಟ್ಟಿ ಪ್ರಕಾರ ಸೆಪ್ಟೆಂಬರ್ 19 ಕ್ಕೆ ಪ್ರಾರಂಭಗೊಂಡು ಅಕ್ಟೋಬರ್ 15ಕ್ಕೆ ಫೈನಲ್ ಪಂದ್ಯ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಅಕ್ಟೋಬರ್ 8ರವರೆಗೆ ಲೀಗ್ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 10 ರಿಂದ ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 15 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಸುವುದಾಗಿ ತೀರ್ಮಾನಿಸಲಾಗಿದೆ.
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದ ಸಂಜೆ 7.30 ರಿಂದ ಆರಂಭಗೊಳ್ಳಲಿದೆ. ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೆಕೆಂಡ್ ಇನ್ನಿಂಗ್ಸಿನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 20 ರಂದು ಅಬುಧಾಬಿಯಲ್ಲಿ ಕೊಲ್ಕೊತ್ತಾ ನೈಟ್ ರೈಡರ್ಸ್ ವಿರುದ್ದ ಆಡಲಿದೆ.
0 comments:
Post a Comment