ಮಂಗಳೂರು, ಆಗಸ್ಟ್ 01, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಆಡಳಿತ ಹಾಗೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಜನರ ಬೇಜವಾಬ್ಧಾರಿಯಿಂದಾಗಿ ಕೋವಿಡ್ ಸೋಂಕು ಮೊದಲ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮುಂಚೆಯೇ 2ನೇ ಅಲೆಯ ಆರ್ಭಟಕ್ಕೆ ತುತ್ತಾಗಬೇಕಾಯಿತು.
ಇದೀಗ ಎರಡನೇ ಅಲೆ ಕೊಂಚ ಇಳಿಮುಖ ಆಗುತ್ತಲೆ ಸರಕಾರ ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಮತ್ತೆ ನಿರ್ಬಂಧ ಕ್ರಮಗಳ ಪಾಲನೆ ಜನರ ವಿವೇಚನೆಗೆ ಬಿಟ್ಟಾಕಿದ ಪರಿಣಾಮ ಜನ ಸರಕಾರದ ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷತಾಭಾವ ಪ್ರದರ್ಶಿಸಿದ್ದರಿಂದಾಗಿ ಮತ್ತೆ ಮೂರನೇ ಅಲೆಯ ಆತಂಕ ರಾಜ್ಯ ರಾಜಧಾನಿ ಬೆಂಗಳೂರು ಸಹಿತ ಬುದ್ದಿವಂತರ ಜಿಲ್ಲೆಯೆನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಗೂ ಬಂದೆರಗಿದೆ.
http://www.karavalitimes.in/2021/07/Corona-guidelines-neglected-in-state.html?m=1
ಸರಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಜಾಣ ಮೌನದಿಂದಾಗಿ ಜನ ಮೋಜು-ಮಸ್ತಿ ಹೆಸರಿನಲ್ಲಿ ಕೊರೋನಾ ಮಾರ್ಗಸೂಚಿಗೆ ಸಂಪೂರ್ಣ ಬೆನ್ನು ಹಾಕಿ ಪ್ರವಾಸಿ ತಾಣಗಳಿಗೆ ಹಿಂಡು ಹಿಂಡಾಗಿ ದೌಡಾಯಿಸಿದರು. ಯುವಕರ ಗುಂಪಂತೂ ಮೋಜು ಮಸ್ತಿಯ ಹೆಸರಿನಲ್ಲಿ ಘಾಟಿ ಪ್ರದೇಶಗಳಿಗೆ ತೆರಳಿ ಅಕ್ಷರಶಃ ಕುಣಿದು ಕುಪ್ಪಳಿಸಿತು. ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಇಲ್ಲದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರಕೃತಿಗೇ ಸವಾಲೆಸೆಯುವ ರೀತಿಯಲ್ಲಿ ಕಠಿಣ ಪರೀಕ್ಷೆಗೆ ಒಡ್ಡಿದ ಭಗವಂತನ ಅಸ್ತಿತ್ವವನ್ನೇ ಪ್ರಶ್ನಿಸುವ ರೀತಿಯ ಆಡಂಬರಗಳು ನಡೆಸಿದ ಪರಿಣಾಮ ಇದೀಗ ಮೂರನೇ ಅಲೆಯ ರೂಪದಲ್ಲಿ ಗಂಡಾಂತರ ಎಬ್ಬಿಸುವ ರೀತಿಯಲ್ಲಿ ಆತಂಕ ತಂದೊಡ್ಡಿದೆ.
ಅಲ್ಲದೆ ಮದುವೆ ಸಹಿತ ಶುಭ ಸಮಾರಂಭಗಳು ಜನ ಸಂಖ್ಯೆಯ ಇತಿ-ಮಿತಿಗಳನ್ನು ಮೀರಿ ಸಭಾಂಗಣಗಳು ತುಂಬಿ ತುಳುಕುವ ರೀತಿಯಲ್ಲಿ ಸರಕಾರದ ಎಲ್ಲ ಮಾರ್ಗಸೂಚಿ ಉಪಕ್ರಮಗಳನ್ನು ಮೆಟ್ಟಿ ನಿಲ್ಲುವ ರೀತಿಯಲ್ಲಿ ನಡೆಯಲಾರಂಭಿಸಿತು.
ಮಸೀದಿ-ಮಂದಿರ ಸಹಿತ ಪ್ರಾರ್ಥನಾ ಮಂದಿರಗಳು ಕೂಡಾ ಯಾವುದೇ ಇತಿ ಮಿತಿ ಇಲ್ಲದೆ ಸಾಮಾಜಿಕ ಅಂತರ ಪಾಲಿಸದೆ ಜನ ಸಂದಣಿಯನ್ನು ಸೇರಿಸಿಕೊಳ್ಳುತೊಡಗಿದವು. ಧಾರ್ಮಿಕ ಮುಖಂಡರು ಭಾಷಣ ಬಿಗಿದರೇ ಹೊರತು ಕನಿಷ್ಠ ಮಾಸ್ಕ್ ಧಾರಣೆಯ ಮಹತ್ವವನ್ನಾದರೂ ಜನರಿಗೆ ಮನವರಿಕೆ ಮಾಡುವಲ್ಲಿ ಧಾರ್ಮಿಕ ಮಂದಿರಗಳ ಆಡಳಿತ ವಿಫಲವಾಯಿತು.
ಮೋಜು-ಆಡಂಬರದ ತಾಣಗಳು ಮತ್ತೆ ತುಳುಕಲಾರಂಭಿಸಿತು. ಪಾರ್ಕ್ ಬೀಚ್ ಗಳೂ ಜನರಿಂದ ತುಂಬಲಾರಂಭಿಸಿತು. ಮಾಸ್ಕ್ ಧಾರಣೆ ಕಡ್ಡಾಯದ ಘೋಷಣೆ ಕೇವಲ ಮಾರ್ಗಸೂಚಿಯ ಕಡತದಲ್ಲಷ್ಟೆ ಉಳಿದುಕೊಂಡಿತು. ಶಿಕ್ಷಣ ಕ್ಷೇತ್ರ ಒಂದಕ್ಕೆ ಮಾತ್ರ ನಿರ್ಬಂಧ ಅಳವಡಿಕೆಯಾಗಿದೆಯೇ ಹೊರತು ಉಳಿದ ಎಲ್ಲಾ ಕ್ಷೇತ್ರಗಳೂ ಸಂಪೂರ್ಣ ಕಾರ್ಯಾರಂಭ ಮಾಡಿ ಮಾರ್ಗಸೂಚಿ ಗಾಳಿಗೆ ತೂರಿದವು.
ಸರಕಾರ ಹಾಗೂ ಆಧಿಕಾರಿ ವರ್ಗಗಳು ಒಂದೆರಡು ದಂಡ ಪ್ರಯೋಗ ಮಾಡಿದ್ದು ಬಿಟ್ಟರೆ ಮಾರ್ಗಸೂಚಿ ಪಾಲನೆಗೆ ಜನರ ಮನವೊಲಿಸುವಲ್ಲಿ ವಿಫಲವಾದ ಪರಿಣಾಮ ಇದೀಗ ಮೂರನೇ ಅಲೆಯಂತೆ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದೆ.
ಕೋವಿಡ್ ಮೂರನೇ ಅಲೆ ಅನಿರೀಕ್ಷಿತವಾಗಿರದೆ ಸರಕಾರ ಸ್ವತಃ ಮೈಮೇಳೆದುಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ ಎಂಬುದೇ ಸದ್ಯಕ್ಕೆ ಕೇಳಿ ಬರುತ್ತಿರುವ ಅಭಿಪ್ರಾಯ. ಹಿಂದಿನ ಕರಾಳ ಅನುಭವದಿಂದ ಸರಕಾರ, ಇಲಾಖಾಧಿಕಾರಿಗಳು ಪಾಠ ಕಲಿತು ತಕ್ಷಣದಿಂದಲೇ ಯಾವುದೇ ಪ್ರಭಾವ-ಲಾಬಿಗಳಿಗೆ ಮಣಿಯದೆ ಮಾರ್ಗಸೂಚಿ ಕಠಿಣ ಪಾಲನೆಗೆ ಕ್ರಮ ಕೈಗೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಘೋರ ಪರಿಣಾಮವನ್ನು ನಿಯಂತ್ರಿಸಬಹುದಷ್ಟೆ.
ಇದೀಗ ಉಂಟಾಗಿರುವ ಆತಂಕದ ಪರಿಸ್ಥಿತಿ ಬಗ್ಗೆ ಕರಾವಳಿ ಟೈಮ್ಸ್ ಕಳೆದ ಭಾನುವಾರವೇ ಸಮಗ್ರ ವರದಿಯೊಂದಿಗೆ ಸರಕಾರದ ಮುಂದೆ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಮುಂದಿಟ್ಟಿತ್ತು ಎಂಬುದನ್ನು ಈ ಸಂದರ್ಭ ಸ್ಮರಿಸಬಹುದು.
0 comments:
Post a Comment