ಮುಂಬೈ, ಜುಲೈ 07, 2021 (ಕರಾವಳಿ ಟೈಮ್ಸ್) : ಬಾಲಿವುಡ್ ಕ್ಷೇತ್ರದಲ್ಲಿ ಮೊದಲ ಖಾನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಹಿರಿಯ ಹಿಂದಿ ನಟ ದಿಲೀಪ್ ಕುಮಾರ್ (98) ಅವರು ತೀವ್ರ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ದಿಲೀಪ್ ಅವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ನಂತರ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಬಳಿಕ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತ ದಿಲೀಪ್ ಅವರ ಅಂತ್ಯ ಸಂಸ್ಕಾರವನ್ನು ಸಾಂಟಾಕ್ರೂಜ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
1922 ಡಿಸೆಂಬರ್ 11 ರಂದು ಪೇಶಾವರ (ಇಂದಿನ ಪಾಕಿಸ್ತಾನ) ದಲ್ಲಿ ಜನಸಿದ್ದ ದಿಲೀಪ್ ಕುಮಾರ್ ಅವರ ನಿಜ ನಾಮ ಮಹಮ್ಮದ್ ಯೂಸುಫ್ ಖಾನ್. ಹಾಗಾಗಿ ಇವರನ್ನು ಬಾಲಿವುಡ್ ನ ಮೊದಲ ಖಾನ್ ಎನ್ನಲಾಗುತ್ತಿತ್ತು. ಪತ್ನಿ ಸಾಯಿರಾ ಬಾನು ಜೊತೆ ಸಂಸಾರ ನಡೆಸುತ್ತಿದ್ದರು. ಫಿಲ್ಮ್ಫೇರ್ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲ ವ್ಯಕ್ತಿ ದಿಲೀಪ್ ಕುಮಾರ್.
1944ರಲ್ಲಿ ಜ್ವರ್ ಭಾತಾ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ದಿಲೀಪ್ ಅಂದಾಜ್, ದಾಗ್, ದೇವದಾಸ್, ಆಜಾದ್, ಶಕ್ತಿ, ಮಸಾಲ್, ಸೌದಾಗರ್, ಕ್ರಾಂತಿ, ಮಘಲ್ ಎ ಆಜಮ್ ಮುಂತಾದ ಚಿತ್ರಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
0 comments:
Post a Comment