ಬೆಳ್ತಂಗಡಿ, ಜುಲೈ 28, 2021 (ಕರಾವಳಿ ಟೈಮ್ಸ್) : ವಿವಾಹ ನಿಶ್ಚಿತವಾಗಿದ್ದ ಬೆಳ್ತಂಗಡಿ ತಾಲೂಕು ದಿಡುಪೆ ನಿವಾಸಿ ಸುರೇಶ್ ನಾಯ್ಕ ಎಂಬವರನ್ನು 2017 ರಲ್ಲಿ ಕೊಂದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಬೆಳ್ತಂಗಡಿ ತಾಲೂಕು ನಾವರ ನಿವಾಸಿ ಆನಂದ ನಾಯ್ಕ, ಪ್ರವೀಣ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಅವರಿಗೆ ಮಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.
ಆರೋಪಿ ಆನಂದ ನಾಯ್ಕ ಎಂಬಾತ ವಿವಾಹಿತನಾಗಿದ್ದರು ಯುವತಿಯೋರ್ವಳನ್ನು ಏಕಮುಖವಾಗಿ ಪ್ರೀತಿಸಿದ್ದು, ಮದುವೆಯಾಗುವೆನೆಂದು ಆಕೆಯ ತಂದೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಯುವತಿಯ ಮನೆಯವರು ನಿರಾಕರಿಸಿರುತ್ತಾರೆ. ಕೆಲ ದಿನಗಳ ಬಳಿಕ ಆ ಯುವತಿಗೆ ದಿಡುಪೆ ನಿವಾಸಿ ಸುರೇಶ ನಾಯ್ಕ ಜೊತೆ ಮದುವೆ ನಿಗದಿಯಾಗಿತ್ತು. ಈ ಬಗ್ಗೆ ವಿಚಾರ ತಿಳಿದ ಆನಂದ ನಾಯ್ಕ, ಸುರೇಶ ನಾಯ್ಕನ ಮೊಬೈಲ್ ಸಂಖ್ಯೆಯನ್ನು ಹೇಗೋ ಸಂಗ್ರಹಿಸಿ ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು, ಈ ಸಂಬಂಧವನ್ನು ಬಿಟ್ಟು ಬಿಡು ಎಂದು ಒತ್ತಾಯಿಸಿದ್ದಾನೆ. ಇದಕ್ಕೆ ಸುರೇಶ ನಾಯ್ಕ ಒಪ್ಪದಿದ್ದಾಗ ಜೀವ ಬೆದರಿಕೆಯನ್ನೂ ಆನಂದ ನಾಯ್ಕ ಹಾಕಿದ್ದ.
ಬಳಿಕ 2017 ಎಪ್ರಿಲ್ 29 ರಂದು 2ನೇ ಆರೋಪಿ ಪ್ರವೀಣ್ ನಾಯ್ಕ ಎಂಬಾತ ಸುರೇಶ ನಾಯ್ಕನಿಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ಗಂಗಾ ಕಲ್ಯಾಣ್ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಈ ಬಗ್ಗೆ ಮಾತನಾಡಲು ದಾಖಲಾತಿಗಳೊಂದಿಗೆ ಉಜಿರೆಗೆ ಬರುವಂತೆ ಹೇಳಿ ಕರೆಸಿಕೊಂಡಿದ್ದ. ಆರೋಪಿಯ ಮಾತು ನಂಬಿದ ಸುರೇಶ ನಾಯ್ಕ ಉಜಿರೆಗೆ ಬಂದಾಗ ಆರೋಪಿಗಳಾದ ಪ್ರವೀಣ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಒಟ್ಟು ಸೇರಿ ಸುರೇಶ ನಾಯ್ಕನನ್ನು ಓಮ್ನಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ನಿಶ್ಚಿತಾರ್ಥ ಪ್ರಸ್ತಾಪವನ್ನು ಕೈ ಬಿಡುವಂತೆ ಒತ್ತಡ ಹಾಕಿದ್ದು, ಇದಕ್ಕೆ ಸುರೇಶ ನಾಯ್ಕ ಒಪ್ಪದೇ ಇದ್ದಾಗ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಸುರೇಶ ನಾಯ್ಕ ನನ್ನು ಕೊಲೆ ಮಾಡಿದ್ದಾರೆ.
ಬಳಿಕ ಮೃತದೇಹವನ್ನು ಧರ್ಮಸ್ಥಳದ ಅವೆಕ್ಕಿ ಎಂಬಲ್ಲಿ ಕೊಂಡೊಯ್ದು ಗೋಣಿ ಚೀಲ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗುರುತು ಸಿಗದಂತೆ ಸುಟ್ಟು ಹಾಕಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/ 2017 ಕಲಂ 147,148, 201,120(ಬಿ), 302 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ಅಂದಿನ ಧರ್ಮಸ್ಥಳ ಪೊಲೀಸ್ ಉಪ ನಿರೀಕ್ಷಕ ಕೊರಗಪ್ಪ ನಾಯ್ಕ ಅವರ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತರ ಆರೋಪ ಸಾಬೀತಾಗಿದೆ ಎಂದು ಮಂಗಳೂರು 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ ಪಿ ರಾಮಲಿಂಗೇಗೌಡ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 15 ಸಾವಿರ ರೂಪಾಯಿ ದಂಡ ವಿಧಿಸಿ, ಮೃತನ ಕುಟುಂಬಕ್ಕೆ 1,00,000/- ರೂಪಾಯಿ ಪರಿಹಾರವನ್ನು ನೀಡುವಂತೆ ಬುಧವಾರ ತೀರ್ಪು ಪ್ರಕಟಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಟ್ವಾಳ ಡಿವೈಎಸ್ಪಿ ಆಗಿದ್ದ ರವೀಶ್ ಸಿ ಆರ್ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ ಎಸ್ ಐ ಕೊರಗಪ್ಪ ನಾಯ್ಕ, ಸಿಬ್ಬಂದಿಗಳಾದ ಬೆನ್ನಿಚ್ಚನ್ , ಸ್ಯಾಮುವೆಲ್, ವಿಜು, ಪ್ರಮೋದ್ ನಾಯ್ಕ್, ರಾಹುಲ್ ರಾವ್, ವೃತ್ತ ಕಛೇರಿಯ ಸಿಬ್ಬಂದಿಗಳಾದ ವೆಂಕಟೇಶ್ ನಾಯ್ಕ್, ಪ್ರವೀಣ್ ದೇವಾಡಿಗ, ನವಾಝ್ ಬುಡ್ಕಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಹಾಗೂ ದಿವಾಕರ್ ಅವರು ಸಹಕರಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ಹಾಗೂ ರಾಜು ಪೂಜಾರಿ ಅವರು ವಾದಿಸಿದ್ದರು.
0 comments:
Post a Comment