ಬಂಟ್ವಾಳ, ಜುಲೈ 26, 2021 (ಕರಾವಳಿ ಟೈಮ್ಸ್) : ಪರಿಸರದ ಉಳಿವಿಗಾಗಿ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವುದು ಮುಖ್ಯ ಅನ್ನುವ ಉದ್ದೇಶವನ್ನಿಟ್ಟುಕೊಂಡು ಮೊಡಂಕಾಪು ನಿವಾಸಿ ಡಾ ಗೋವರ್ದನ್ ರಾವ್ ಅವರು ತನ್ನ ಪುತ್ರ ಪ್ರಜ್ವಲ್ ಕುಮಾರ್ ಜೊತೆ ಸೇರಿ ಸತತ ಎರಡು ದಿನಗಳಿಂದ ಬಿ ಸಿ ರೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ ಸಿ ರೋಡು-ಕೈಕಂಬದ ರಸ್ತೆ ವಿಭಾಜಕದಲ್ಲಿ ಬಗೆ ಬಗೆಯ ಹೂವಿನ ಗಿಡ ಹಾಗೂ ಅಲಂಕಾರಿಕ ಗಿಡಗಳನ್ನು ನೆಟ್ಟು ಪರಿಸರ ಪ್ರೇಮಿಗಳ ಮನ ಸೆಳೆದಿದ್ದಾರೆ.
ರಸ್ತೆ ಅಗಲೀಕರಣ ಹಾಗೂ ವಿವಿಧ ಅಭಿವೃದ್ದಿ ನೆಪದಲ್ಲಿ ಅದೆಷ್ಟೋ ಗಿಡ-ಮರಗಳ ಮಾರಣ ಹೋಮವೇ ನಡೆಯುತ್ತಿದೆ. ಆದರೇ ಅದರ ಬದಲಿಗೆ ಬೇರೆ ಗಿಡಗಳನ್ನು ನೆಟ್ಟು ಬೆಳೆಸುವ ಪ್ರಯತ್ನ ಯಾರಿಂದಲೂ ನಡೆಯುತ್ತಿಲ್ಲ. ಇದನ್ನು ಮನಗಂಡ ಗೋವರ್ದನ ಅವರು ಸ್ವತಃ ಮಗನೊಂದಿಗೆ ಸೇರಿಕೊಂಡು ಈ ಕಾರ್ಯ ಕೈಗೊಂಡಿದ್ದಾರೆ.
ಇಂತಹ ಪರಿಸರ ಉಳಿಸುವ ಕಾರ್ಯಗಳನ್ನು ಕೇವಲ ಸರಕಾರಗಳೇ ಅಥವಾ ಇಲಾಖೆಗಳೇ ಮಾಡಬೇಕೆಂದೇನು ಇಲ್ಲ. ಊರವರು ಅಥವಾ ವ್ಯಕ್ತಿಗಳೇ ಸ್ವತಃ ಮಾಡಬಹುದು ಎಂಬುದನ್ನು ಗೋವರ್ದನ್ ಹಾಗೂ ಅವರ ಪುತ್ರ ತೋರಿಸಿಕೊಟ್ಟಿದ್ದಾರೆ. ಗಿಡ ನೆಟ್ಟು ಬೆಳಸಲು ಮಳೆಗಾಲ ಸೂಕ್ತ ಸಮಯ ಎಂದು ಮನಗಂಡ ಅವರು ಮಳೆಗಾಲದಲ್ಲೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಗಿಡಗಳನ್ನು ನೆಡುವುದರಿಂದ ಪರಿಸರ ಉಳಿಯುವ ಜೊತೆಗೆ ನಗರದ ಸೌಂದರ್ಯವೂ ಹೆಚ್ಚುವುದಲ್ಲದೆ ವಾತಾವರಣಕ್ಕೆ ಆಮ್ಲಜನಕದ ಪೂರೈಕೆಯೂ ಆಗುತ್ತದೆ. ಇವರು ತಮ್ಮ ಮನೆಯ ಟೆರೇಸ್ ಮೇಲೂ ಗಾರ್ಡನ್ ಮಾಡಿ ಈ ಹಿಂದೆ ಸುದ್ದಿಯಾಗಿದ್ದರು. ಕೈಕಂಬದಿಂದ ಬಿ ಸಿ ರೋಡು ಹಾಗೂ ಕೈಕಂಬದಿಂದ ಬ್ರಹ್ಮರಕೂಟ್ಲುವರೆಗ ಗಿಡಗಳನ್ನು ನೆಡುವ ಯೋಜನೆಯನ್ನು ಇವರು ಹಾಕಿಕೊಂಡಿದ್ದಾರೆ.
ಎಲ್ಲಾ ಸರಕಾರಿ ಕಚೇರಿಗಳಾದ ಪೋಸ್ಟ್ ಅಫೀಸ್, ಬಸ್ಸು ನಿಲ್ದಾಣ, ಪೊಲೀಸ್ ಸ್ಟೇಷನ್, ರೈಲ್ವೇ ಸ್ಟೇಷನ್ ಗಳಲ್ಲೂ ಗಿಡಗಳನ್ನು ನೆಡುವ ಉದ್ಧೇಶ ಇವರದ್ದು. ಇವರ ಈ ಪರಿಸರ ಪೂರಕ ಕೆಲಸಕ್ಕೆ ಸಾರ್ವಜನಿಕರು ಹಾಗೂ ಸಕಾರಿ ಇಲಾಖಾಧಿಕಾರಿಗಳೂ ಕೈ ಜೋಡಿಸಿದರೆ ಖಂಡಿತ ಫಲ ಸಿಗಲು ಸಾಧ್ಯ.
0 comments:
Post a Comment