ಬಂಟ್ವಾಳ, ಜುಲೈ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಶನಿವಾರ ಅಕ್ರಮ ಗಾಂಜಾ ಪ್ರಕರಣ ಬೇಧಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ಗಾಂಜಾ ಸಹಿತ ಆರೋಪಿಗಳ ಪೈಕಿ ಇಕ್ಬಾಲ್ ಅಲಿಯಾಸ್ ಕಡ್ಲೆ ಇಕ್ಬಾಲ್ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಇತರ ಇಬ್ಬರು ಆರೋಪಿಗಳಾದ ಸಜಿಪನಡು ನಿವಾಸಿ ಎಸ್ ಕೆ ರಫೀಕ್ ಹಾಗೂ ಕಂಚಿನಡ್ಕಪದವು ನಿವಾಸಿ ಮೋನು ಅಲಿಯಾಸ್ ಪಿಲಿ ಮೋನು ಎಂಬವರು ಪರಾರಿಯಾಗಿದ್ದಾರೆ.
ತಾಲೂಕಿನಾದ್ಯಂತ ಅಕ್ರಮವಾಗಿ ಗಾಂಜಾ ಶೇಖರಿಸಿ ವಿತರಣೆ ಮಾಡುತ್ತಿದ್ದ ಮತ್ತು ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮೇಲೆ ನಿಗಾ ಇಡುವಂತೆ ಜಿಲ್ಲಾ ಎಸ್ಪಿ ಅವರ ಸೂಚನೆಯಂತೆ ಬಂಟ್ವಾಳ ಡಿವೈಎಸ್ಪಿ ಅವರ ಸೂಚನೆ ಮೇರೆಗೆ ಅಕ್ರಮ ಗಾಂಜಾ ಪತ್ತೆ ಹಚ್ಚಲು ಪೊಲೀಸ್ ತಂಡ ರಚಿಸಲಾಗಿ ಬಂಟ್ವಾಳ ಗ್ರಾಮಾಂತರ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್ ಹಾಗೂ ಪಿಎಸ್ಸೈ ಪ್ರಸನ್ನ ಎಂ ಎಸ್ ನೇತೃತ್ವದ ವಿಶೇಷ ಪೊಲೀಸ್ ತಂಡದ ಸದಸ್ಯರಾದ ಉದಯ ರವಿ, ಜನಾರ್ಧನ, ಸುರೇಶ್, ಪ್ರವೀಣ್, ಗೋಣಿಬಸಪ್ಪ, ಇರ್ಷಾದ್, ವಿವೇಕ್, ಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ದಾಳಿ ವೇಳೆ ಸುಮಾರು 30 ಸಾವಿರ ರೂಪಾಯಿ ಮೌಲ್ಯದ 1 ಕೆಜಿ 150 ಗ್ರಾಂ ಗಾಂಜಾವನ್ನು ಪೊಲೀಸರ ತಂಡ ವಶಪಡಿಸಿಕೊಂಡಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2021 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment