ಬಂಟ್ವಾಳ, ಜುಲೈ 19, 2021 (ಕರಾವಳಿ ಟೈಮ್ಸ್) : ಗಾಂಜಾ ಸಹಿತ ಅಮಲು ಪದಾರ್ಥ ಸೇವನೆ, ಸಾಗಾಟಗಾರರ ಹೆಡೆಮುರಿ ಕಟ್ಟಲು ಜಿಲ್ಲಾ ಎಸ್ಪಿ ರಚಿಸಿರುವ ವಿಶೇಷ ಪೊಲೀಸ್ ತಂಡ ನಿರಂತರ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಇಬ್ಬರು ಅಕ್ರಮ ಗಾಂಜಾಕೋರರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಶನಿವಾರ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಅಡ್ಡೆಗೆ ದಾಳಿ ನಡೆಸಿ ಗಾಂಜಾ ಸಹಿತ ಓರ್ವನನ್ನು ಬಂಧಿಸಿದ್ದು, ಇದೀಗ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು ಸೋಮವಾರ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಕ್ರಮ ಗಾಂಜಾ ಸಾಗಾಟದ ಆರೋಪಿಯನ್ನು ಅಡ್ಡ ಹಾಕಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಟ್ವಾಳ ನಗರ ಠಾಣಾ ಪಿಎಸ್ಸೈ ಅವಿನಾಶ್ ಎಚ್ ಅವರು ಸೋಮವಾರ ಗಸ್ತಿನಲ್ಲಿದ್ದ ವೇಳೆ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಜಿಪಮುನ್ನೂರು ಗ್ರಾಮದ, ಕಂದೂರು ಎಂಬಲ್ಲಿ ಆರೋಪಿಯ ವಾಹನ ಅಡ್ಡ ಹಾಕುವಲ್ಲಿ ಸಫಲರಾಗಿ ಗಾಂಜಾ ಸಹಿತ ಆರೋಪಿ ಸಜಿಪಮೂಡ ಗ್ರಾಮದ ಸುಭಾಶ್ ನಗರ ನಿವಾಸಿ ಮುಹಮ್ಮದ್ ಅವರ ಪುತ್ರ ಇಲಿಯಾಸ್ ಯಾನೆ ಎಲಿಯಾಸ್ (36) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಯಿಂದ ಪೊಲೀಸರು ಅಂದಾಜು 30 ಸಾವಿರ ರೂಪಾಯಿ ಮೌಲ್ಯದ 1430 ಗ್ರಾಂ ತೂಕದ ಗಾಂಜಾ ಹಾಗೂ 10 ಪ್ಯಾಕ್ ಒ ಸಿ ಬಿ ಸ್ಲಿಮ್ ಪ್ರೀಮಿಯಮ್ ಎಂದು ಅಂಗ್ಲ ಭಾಷೆಯಲ್ಲಿ ಬರೆದ ಚಿಕ್ಕ ಪ್ಯಾಕೆಟ್ ಗಾಂಜಾ ಸೇವನೆಗೆ ಬಳಸುವ ಸ್ಟ್ರಿಪ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ ಅಂದಾಜು ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಆಕ್ಟಿವಾ 5 ಜಿ ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಎಸ್ಪಿ ಹೃಷಿಕೇಷ್ ಭಗವಾನ್ ಸೋನಾವಣೆ ಹಾಗೂ ಎಡಿಶನಲ್ ಎಸ್ಪಿ ಭಾಸ್ಕರ ಒಕ್ಕಲಿಗ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವೆಲೈಂಟೈನ್ ಡಿಸೋಜಾ ಅವರ ಆದೇಶದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಚೆಲುವರಾಜು, ಪಿಎಸ್ಸೈ ಅವಿನಾಶ್, ಎಎಸ್ಸೈ ಗಿರೀಶ್, ಬಂಟ್ವಾಳ ಡಿವೈಎಸ್ಪಿ ವಿಶೇಷ ತಂಡದ ಸಿಬ್ಬಂದಿಗಳಾದ ಉದಯ ರೈ, ಪ್ರವೀಣ್ ಎಂ, ಪ್ರಶಾಂತ್, ಇರ್ಷಾದ್ ಪಿ, ಗೋಣಿಬಸಪ್ಪ, ಕುಮಾರ್ ಹೆಚ್ ಕೆ, ವಿವೇಕ್, ರಾಘವೇಂದ್ರ ಅವರು ಭಾಗವಹಿಸಿದ್ದರು.
0 comments:
Post a Comment