ಬಂಟ್ವಾಳ, ಜುಲೈ 27, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಕೋವಿಡ್ ನೋಡಲ್ ಅಧಿಕಾರಿಯಾಗಿ ತಾಲೂಕು ತಹಶೀಲ್ದಾರರಿಂದ ನೇಮಕಗೊಂಡಿದ್ದರೂ ಆದ್ಯತಾ ಗುಂಪುಗಳಿಗೆ ನೀಡುವ ಅನೆಕ್ಷರ್ ಫಾರ್ಮ್ ನೀಡಲು ನಿರಾಕರಿಸುತ್ತಿರುವ ಬಗ್ಗೆ ಪುರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1
18-44 ವರ್ಷದೊಳಗಿನ ಅದ್ಯತಾ ಗುಂಪುಗಳಿಗೆ ನಿಗದಿತ ನೋಡಲ್ ಅಧಿಕಾರಿಗಳ ಅನೆಕ್ಷರ್ ಫಾರ್ಮ್ ಜೊತೆ ಬಂದರೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಬಗ್ಗೆ ಈಗಾಗಲೇ ಸರಕಾರ ಹಾಗೂ ಆರೋಗ್ಯ ಇಲಾಖೆ ಆದೇಶ ನೀಡಿದ್ದು, ಈ ಬಗ್ಗೆ ತಾಲೂಕಿನ ಪಂಚಾಯತ್ ವ್ಯಾಪ್ತಿಗೆ ಪಿಡಿಒಗಳು, ಪುರಸಭೆಗೆ ಮುಖ್ಯಾಧಿಕಾರಿ, ಕಾರ್ಮಿಕ ವರ್ಗಕ್ಕೆ ಕಾರ್ಮಿಕ ಇಲಾಖೆಯ ನಿರೀಕ್ಷಕರು ಇತ್ಯಾದಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ಈಗಾಗಲೇ ತಾಲೂಕು ತಹಶೀಲ್ದಾರ್ ಅವರು ನೇಮಕಗೊಳಿಸಿದ್ದಾರೆ. ಇದರಂತೆ ತಮ್ಮ ವ್ಯಾಪ್ತಿಗೆ ಬರುವ ಎಲ್ಲರಿಗೂ ಸಂಬಂಧಪಟ್ಟ ಅಧಿಕಾರಿಗಳು ಅನೆಕ್ಷರ್ ಫಾರ್ಮ್ ನೀಡುವ ಮೂಲಕ ಆದ್ಯತಾ ವರ್ಗಗಳ ಹಿತ ಕಾಪಾಡುತ್ತಿದ್ದಾರೆ.
ಆದರೆ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಈ ಬಗ್ಗೆ ತಮ್ಮ ವ್ಯಾಪ್ತಿಗೆ ಬರುವ ವರ್ಗಗಳಿಗೆ ಅನೆಕ್ಷರ ಫಾರ್ಮ್ ನೀಡಲು ನಿರಾಕರಿಸುತ್ತಿದ್ದು, ಕೇವಲ ತಮ್ಮ ಕಛೇರಿ ಸಿಬ್ಬಂದಿಗಳಿಗೆ ಮಾತ್ರ ನೀಡುವುದಾಗಿ ಸತಾಯಿಸುತ್ತಿದ್ದಾರೆ ಎಂದು ಪುರವಾಸಿಗಳು ಆಕ್ರೋಶಿತರಾಗಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಸಿದ್ದಾಂತವನ್ನು ಇಲ್ಲಿನ ಮುಖ್ಯಾಧಿಕಾರಿ ಎಲ್ಲ ಕ್ಷೇತ್ರಗಳಲ್ಲೂ ಅನುಸರಿಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಪುರವಾಸಿಗಳಿಂದ ಕೇಳಿ ಬರುತ್ತಿದ್ದು, ಇದೀಗ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆಯೂ ಮುಖ್ಯಾಧಿಕಾರಿ ಚುನಾಯಿತ ಪ್ರತಿನಿಧಿಗಳು ಕೂಡಾ ಆಗ್ರಹಿಸುತ್ತಿದ್ದರೂ ತಮ್ಮ ಉಡಾಫೆ ಹಾಗೂ ಬೇಜವಾಬ್ದಾರಿತನವನ್ನು ಮೆರೆಯುತ್ತಿದ್ದಾರೆ ಎಂದು ಪಟ್ಟಣವಾಸಿಗಳು ದೂರಿದ್ದಾರೆ.
ಪುರಸಭೆಯ ಅಧ್ಯಕ್ಷ ಸಹಿತ ಚುನಾಯಿತ ಜನಪ್ರತಿನಿಧಿಗಳೊಂದಿಗೂ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸದ ಮುಖ್ಯಾಧಿಕಾರಿ ಮಾತ್ರ ಆನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.
ತಾಲೂಕು ಆರೋಗ್ಯಾಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆದ್ಯತಾ ವರ್ಗಗಳಿಗೆ ಅನೆಕ್ಷರ್ ಫಾರ್ಮ್ ನೀಡಲೇಬೇಕು ಎಂದು ಮಾಹಿತಿ ನೀಡುತ್ತಿದ್ದರೂ ಮುಖ್ಯಾಧಿಕಾರಿ ಮಾತ್ರ ಸರಕಾರ ಹಾಗೂ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುತ್ತಿಲ್ಲ.
ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳು ಜನರೊಂದಿಗೆ ತೀವ್ರ ಒರಟಾಗಿ ಹಾಗೂ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದು, ಬೆಕ್ಕಿಗೆ ಗಂಟೆ ಕಟ್ಟುವರಾರು ಎಂಬ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಸಹಿತ ಮೇಲಧಿಕಾರಿಗಳು ತಕ್ಷಣ ಇಲ್ಲಿನ ಮುಖ್ಯಾಧಿಕಾರಿಯ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭಾ ಕಛೇರಿ ಮುಂದೆ ಧರಣಿ ಕೂರುವುದಾಗಿ ಪುರವಾಸಿಗಳು ಎಚ್ಚರಿಸಿದ್ದಾರೆ.
0 comments:
Post a Comment