ಬಂಟ್ವಾಳ, ಜುಲೈ 19, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಸೋಮವಾರ ಮಳೆ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದರೂ ಮಳೆ ಹಾನಿ ಪ್ರಕರಣಗಳು ಹಲವು ವರದಿಯಾಗಿದೆ. ನೇತ್ರಾವತಿ ನದಿ ನೀರಿನ ಮಟ್ಟವೂ ಇಳಿಕೆಯಾಗಿದ್ದು, ಸೋಮವಾರ ಬೆಳಿಗ್ಗೆ 4.6 ಮೀಟರಿಗಿಳಿದಿದೆ. ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಿಗ್ಗೆವರೆಗೆ ತಾಲೂಕಿನಲ್ಲಿ 44.9 ಮಿ ಮೀ ಮಳೆ ದಾಖಲಾಗಿದೆ.
ಬಾಳೆಪುಣಿ ಗ್ರಾಮದ ಕೆಳಗಿನ ನಾರ್ಯ ನಿವಾಸಿ ಶೀನ ಶೆಟ್ಟಿ ಬಿನ್ ಧೂಮಣ್ಣ ಶೆಟ್ಟಿ ಅವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಮೇರಮಜಲು ಗ್ರಾಮದ ಫ್ರಾನ್ಸಿಸ್ ಲಸ್ರಾದೋ ಅವರ ಕಂಪೌಂಡ್ ಹಾನಿಯಾಗಿದೆ. ಪುದು ಗ್ರಾಮದ ಕೋಡಿಮಜಲು ನಿವಾಶೀ ರಫೀಕ್ ಬಿನ್ ಹಸನಬ್ಬ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಪಾಣೆಮಂಗಳೂರು ಸಮೀಪದ ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗೆ ಮಳೆಯಿಂದ ಹಾನಿಯಾಗಿದೆ.
ಬಂಟ್ವಾಳ ಸಮೀಪದ ಭಂಡಾರಿಬೆಟ್ಟು ನಿವಾಸಿ ಗಣೇಶ್ ಬಿನ್ ದೋಜು ಮೂಲ್ಯ ಹಾಗೂ ಶಶಿ ಭಂಡಾರಿ ಅವರ ಎರಡು ಮನೆಗಳ ನಡುವೆ ಇರುವ ಗುಡ್ಡದ ಮಣ್ಣು ಜರಿದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಕುರ್ಚಿಪಲ್ಲ ನಿವಾಸಿ ಸುನೀತಾ ಕೋಂ ಪದ್ಮನಾಭ ಅವರ ಶಾಮಿಯಾನದ ಅಂಗಡಿಯ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಬಿ ಮೂಡ ಗ್ರಾಮದ ಭಂಡಾರಿಬೆಟ್ಟು ರಾಜ್ಯ ಹೆದ್ದಾರಿ ಬದಿ ಗುಡ್ಡ ಜರಿದು ಪಕ್ಕದ ಮರ ಬೀಳುವ ಹಂತಕ್ಕೆ ತಲುಪಿದೆ. ಬಿ ಸಿ ರೋಡಿನ ಮಿನಿ ವಿಧಾನಸೌದದ ಬದಿಯಲ್ಲಿರುವ ಒಂದು ಮರ ಮುರಿದು ಬಿದ್ದಿದೆ.
ಸಜಿಪನಡು ಗ್ರಾಮದ ಕೋಣೆಮಾರುವಿನಲ್ಲಿ ಗುಡ್ಡೆ ಕುಸಿಯುವ ಸಂಭವ ಇದ್ದು, ಪಕ್ಕದ ಮನೆಗಳಿಗೆ ಈ ಬಗ್ಗೆ ತಿಳುವಳಿಕೆ £ೀಡಲಾಗಿದೆ. ಇಡ್ಕಿದು ಗ್ರಾಮದ ಏಮಾಜೆ ನಿವಾಸಿ ಶಿವರಾಮ ನಾಯ್ಕ ಬಿನ್ ಐತಪ್ಪ ನಾಯ್ಕ ಅವರ ವಾಸದ ಕಚ್ಚಾ ಮನೆಯು ಗಾಳಿ ಮಳೆಗೆ ಭಾಗಶಃ ಹಾನಿಯಾಗಿರುತ್ತದೆ. ಬಂಟ್ವಾಳ ಮೂಡ ಗ್ರಾಮದ ಭಂಡಾರಿಬೆಟ್ಟುವಿನ ಅಪಾಯಕಾರಿ ಮರ ಕಡಿಯುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
0 comments:
Post a Comment