ಬಂಟ್ವಾಳ, ಜುಲೈ 31, 2021 (ಕರಾವಳಿ ಟೈಮ್ಸ್) : ಭಾರತ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಆಯಿಲ್ ಮತ್ತು ನ್ಯಾಚುರಲ್ ಲಿಮಿಟಿಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಮಾಲಿಕತ್ವದ ಸಾರ್ವಜನಿಕ ಸ್ವಾಮ್ಯಕ್ಕೆ ಒಳಪಟ್ಟ ಮಂಗಳೂರಿನಿಂದ ಬೆಂಗಳೂರಿಗೆ ಹಾಸನದ ಮೂಲಕ ಹಾದು ಹೋಗುವ ಕೊಳವೆ ಮಾರ್ಗವಾಗಿ ಕಾರ್ಯ ನಿರ್ವಹಿಸುವ ಪೈಪ್ ಲೈನನ್ನು ಬಂಟ್ವಾಳ ತಾಲೂಕಿನ ಸೊರ್ನಾಡು ಬಳಿ ಕೊರೆದು ಡೀಸೆಲ್ ಕಳವು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಜುಲೈ 30ರ ಶುಕ್ರವಾರ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಳ ಗ್ರಾಮದ ಸೋರ್ನಾಡು ಸಮೀಪದ ಅರ್ಬಿ ಎಂಬಲ್ಲಿ ಐವನ್ ಎಂಬವರಿಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಪೈಪ್ ಲೈನ್ ಹಾದು ಹೋಗುತ್ತಿದೆ. ಇದನ್ನು ಕೊರೆದು ಆರೋಪಿ ಡೀಸೆಲ್ ಕಳವು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಎಂಎಚ್‍ಬಿ ಲಿಮಿಟೆಡ್ ಇದರ ಸ್ಟೇಷನ್ ಇನ್ ಚಾರ್ಜ್ ಆಫೀಸರ್ ರಾಜನ್ ಬಿನ್ ಗೋಪಾಲಕೃಷ್ಣ ನಾಯರ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಜುಲೈ 11 ರ ಬೆಳಿಗ್ಗೆ 7 ಗಂಟೆಯಿಂದ ಜುಲೈ 30ರ ಸಂಜೆ 5 ಗಂಟೆಯವರೆಗಿನ ಅವಧಿಯಲ್ಲಿ ಪೆಟ್ರೋಲಿಯಂ ಹರಿವಿನಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಪೈಪ್ ಲೈನಿನಲ್ಲಿ ಕೋಟಿಂಗ್ ಡ್ಯಾಮ್ಯಾಜ್ ಆಗಿರಬಹುದು ಎಂದು ಸರ್ವೆ ನಡೆಸಿದಾಗ ಸೊರ್ನಾಡು ಎಂಬಲ್ಲಿ ಹರಿವು ಸೋರಿಕೆ ಆಗುತ್ತಿರುವುದು ಕಂಡು ಬಂದಿದೆ. ಸದ್ರಿ ಸ್ಥಳದಲ್ಲಿ ಭೂಮಿ ಅಗೆದು ನೋಡಿದಾಗ ಪಿಎಂಎಚ್‍ಬಿಎಲ್ ಪೈಪ್ ಲೈನಿಗೆ 1.5 ಇಂಚಿನ ಪೈಪ್ ಮತ್ತು ವಾಲ್ ಅಳವಡಿಸಿರುವ ಎಂಎಸ್ ಪ್ಲೇಟನ್ನು ವೆಲ್ಡ್ ಮಾಡಿ 55 ಮೀ ಉದ್ದದ ಪ್ಲೆಕ್ಷಿಬಲ್ ಪೈಪನ್ನು ಅಳವಡಿಸಿ 1.5 ಇಂಚು ವ್ಯಾಸ ಹೊಂದಿರುವ 3 ವಾಲ್‍ಗಳನ್ನು ಅಳವಡಿಸಿದ ಪೆಟ್ರೋಲಿಂ ಉತ್ಪನ್ನವನ್ನು ಕಳವು ಮಾಡುತ್ತಿರುವುದು ಕಂಡು ಬಂದಿದ್ದು, ಸದ್ರಿ ಪೈಪನ್ನು ಅಳವಡಿಸಿರುವ ಜಾಗವು ಐವನ್ ಎಂಬುವರಿಗೆ ಸೇರಿದ ಜಾಗವಾಗಿದ್ದು, ಕೃತ್ಯದಲ್ಲಿ ಐವನ್ ಭಾಗಿಯಾಗಿರುವುದು ಅನುಮಾನವಿರುತ್ತದೆ. ಅಲ್ಲದೆ ಹಾನಿಯಾಗಿರುವ ಪೈಪ್ ಲೈನ್ ಮೊತ್ತ 90,000/- ರೂಪಾಯಿ ಆಗಿದ್ದು ಪೈಪ್ ಲೈನಿನಿಂದ ಕಳ್ಳತನ ಆಗಿರುವ ಪೆಟ್ರೋಲಿಯಂ ಉತ್ಪನ್ನವನ್ನು ಇನ್ನಷ್ಟೆ ವಿಶ್ಲೇಷಣೆ ಮಾಡಬೇಕಾಗಿದ್ದು, ಕಳ್ಳತನ ಆಗಿರುವ ಪೆಟ್ರೋಲಿಯಂ ಉತ್ಪನ್ನದ ಪ್ರಮಾಣ ಮತ್ತು ಮೊತ್ತವನ್ನು ಮುಂದಿನ ಹಂತದಲ್ಲಿ ಅಂದಾಜಿಸಲಾಗುವುದು ಎಂದು ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 86-2021 ರಂತೆ ಕಲಂ ಪೆಟ್ರೋಲಿಯಂ ಆಂಡ್ ಮಿನರಲ್ಸ್ ಪೈಪ್ ಲೈನ್ ಆಕ್ಟ್ 1962 ಹಾಗೂ ಅಮೆಂಡ್‍ಮೆಂಟ್ ಆಕ್ಟ್ 2011 ಸೆಕ್ಷನ್ 15(20 ಹಾಗೂ ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984, ಸೆಕ್ಷನ್ 3(2) ಮತ್ತು 427, 285 ಹಾಗೂ 379 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment