ಬಂಟ್ವಾಳ, ಜುಲೈ 02, 2021 (ಕರಾವಳಿ ಟೈಮ್ಸ್) : ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಇನ್ನೂ ಬಾರದೆ ಇದ್ದು, ತಾಲೂಕಿನ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಅಥವಾ ಪೋಷಕರಲ್ಲಿ ಶಾಲಾ ಶುಲ್ಕಕ್ಕಾಗಿ ಒತ್ತಾಯಪಡಿಸಿದರೆ ನೇರವಾಗಿ ದೂರು ಕೊಡಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಪಿ ಜ್ಞಾನೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಕೆಲ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಶಾಲಾ ಶುಲ್ಕಕ್ಕಾಗಿ ಒತ್ತಾಯ ಮಾಡುವ ಬಗ್ಗೆ ವಿದ್ಯಾರ್ಥಿ ಪೋಷಕರು ದೂರಿಕೊಂಡಿರುವ ಹಿನ್ನಲೆಯಲ್ಲಿ ಈ ಬಗ್ಗೆ ಪತ್ರಿಕೆ ಜೊತೆ ಮಾತನಾಡಿದ ಅವರು ಕಳೆದ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಶೇ 70 ರಷ್ಟು ಶುಲ್ಕ ಪಾವತಿಸುವ ಬಗ್ಗೆ ಮಾತ್ರ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿದ್ದು, ಅದೂ ಕೂಡಾ ಕೇವಲ ಸರಕಾರಿ ಶುಲ್ಕಕ್ಕೆ ಸಂಬಂಧಿಸಿದಂತೆ ಮಾತ್ರ ಈ ಸುತ್ತೋಲೆ ಹೊರಡಿಸಲಾಗಿದೆ ಹೊರತು ಡೊನೇಶನ್ ಆಗಲೀ ಇತರ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ. ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕೃತ ಸುತ್ತೋಲೆ ಸರಕಾರದಿಂದಾಗಲೀ, ಶಿಕ್ಷಣ ಇಲಾಖೆಯಿಂದಾಗಲೀ ಬಂದಿರುವುದಿಲ್ಲ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಪೋಷಕರೊಂದಿಗೆ ಶಾಲಾ ಶುಲ್ಕ ಪಾವತಿಸಲು ಬಲವಂತವಾಗಿ ಒತ್ತಾಯಿಸಿದರೆ ಪೋಷಕರು ಈ ಬಗ್ಗೆ ಧೈರ್ಯವಾಗಿ ನನ್ನನ್ನು ಸಂಪರ್ಕಿಸಿ ದೂರು ನೀಡಬಹುದು. ಅಂತಹ ಶುಲ್ಕ ಬಲವಂತ ಪ್ರಕರಣಗಳೇನಾದರೂ ಬಂದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಬಿಇಒ ಜ್ಞಾನೇಶ್ ತಿಳಿಸಿದ್ದಾರೆ.
0 comments:
Post a Comment