ಬಂಟ್ವಾಳ, ಜುಲೈ 23, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ತಣ್ಣಗಾಗಿದ್ದ ಮುಂಗಾರು ಗುರುವಾರ ರಾತ್ರಿಯಿಂದ ಮತ್ತೆ ಬಿರುಸಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಶುಕ್ರವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ಏರಿಕೆಯಾಗಿದೆ. ನದಿ ನೀರು 6.9 ಮೀ ಎತ್ತರದಲ್ಲಿ ಹರಿಯುತ್ತಿದ್ದು, 8.5 ಮೀ ಬಂಟ್ವಾಳದ ಮಟ್ಟಿಗೆ ಅಪಾಯದ ಮಟ್ಟ ಎಂದು ತಾಲೂಕಾಡಳಿತ ಗುರುತಿಸಿದೆ.
ಅದೇ ರೀತಿ ತಾಲೂಕಿನ ವಿವಿಧೆಡೆ ಮಳೆ ಹಾನಿ ಪ್ರಕರಣಗಳೂ ವರದಿಯಾಗಿದೆ. ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆಯ ಶಾರದಾ ಪ್ರೌಢಶಾಲಾ ಕಂಪೌಂಡ್ ಕುಸಿದು ಬಿದ್ದಿದೆ. ಶಂಭೂರು ಗ್ರಾಮದ ನರ್ಸೆರೆಕೋಡಿ ನಿವಾಸಿ ಬಾಬು ಸಪಲ್ಯ ಬಿನ್ ರಾಮಪ್ಪ ಸಪಲ್ಯ ಅವರ ಅಡಿಕೆ ತೋಟಕ್ಕೆ ಹಾನಿ ಸಂಭವಿಸಿದೆ. ಶಂಭೂರು ಗ್ರಾಮದ ಕೆದುಕೊಡಿ ನಿವಾಸಿ ರಮೇಶ ಬಿನ್ ಸೇಸಪ್ಪ ಅವರ ಬಚ್ಚಲು ಮನೆಗೆ ಹಾನಿಯಾಗಿರುವ ಬಗ್ಗೆ ಜುಲೈ 20 ರಂದು ವರದಿ ಸಲ್ಲಿಸಲಾಗಿತ್ತು. ಇದೀಗ ಮತ್ತೆ ಅವರ ಮನೆ ಗೋಡೆ ಬಿರುಕು ಬಿಟ್ಟಿದ್ದು, ಕುಸಿಯುವ ಆತಂಕ ಎದುರಾಗಿರುವ ಹಿನ್ನಲೆಯಲ್ಲಿ ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.
ನೆಟ್ಲಮುಡ್ನೂರು ಗ್ರಾಮದ ಏಮಾಜೆ ನಿವಾಸಿ ಬಾಬು ನಲ್ಕೆ ಬಿನ್ ಅಲಂಬರ ನಲ್ಕೆ ಅವರ ಕಚ್ಚಾ ಮನೆಯ ಬಚ್ಚಲು ಹಾಗೂ ಶೌಚಾಲಯದ ಕಟ್ಟಡವು ಗಾಳಿ ಮಳೆಗೆ ಹಾನಿ ಸಂಭವಿಸಿರುತ್ತದೆ. ಪುಣಚ ಗ್ರಾಮದ ಗರಡಿ ನಿವಾಸಿ ಇನಾಸ್ ಡಿ’ಸೋಜ ಬಿನ್ ಕತ್ರಿನ್ ಡಿ’ಸೋಜ ಅವರ ಮನೆಯ ತಡೆಗೋಡೆಯ ಕೆಳಭಾಗದಲ್ಲಿ ಮಣ್ಣು ಕುಸಿದಿದ್ದು, ಯಾವುದೇ ಗಂಭೀರ ಹಾನಿ ಸಂಭವಿಸಿರುವುದಿಲ್ಲ. ಕುಳ ಗ್ರಾಮದ ಅಡ್ಯಾಲು ನಿವಾಸಿ ಕಮಲ ಕೋಂ ದಿವಂಗತ ಮೋನಪ್ಪ ಗೌಡ ಅವರ ಕಚ್ಚಾ ವಾಸದ ಮನೆ ಗಾಳಿ ಮಳೆಗೆ ಭಾಗಶಃ ಹಾನಿಯಾಗಿದೆ.
0 comments:
Post a Comment