ಬಂಟ್ವಾಳ, ಜುಲೈ 05, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಲ್ಲಡ್ಕ- ಕುರ್ಮಾನು- ಕಾಂಪ್ರಬೈಲು- ಕಶೆಕೋಡಿ- ದಾಸಕೋಡಿ ಸಂಪರ್ಕದ ಪ್ರಮುಖ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದ್ದು, ಜನ ನಡೆದಾಡಲೂ ಸಾದ್ಯವಾಗದ ರೀತಿಯಲ್ಲಿ ಹದಗೆಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 3 ವರ್ಷಗಳ ಹಿಂದೆ ಈ ರಸ್ತೆಯನ್ನು ಅಂದಿನ ಬಂಟ್ವಾಳ ಶಾಸಕ ಕಂ ಸಚಿವರಾಗಿದ್ದ ಬಿ ರಮಾನಾಥ ರೈ ಅವರ ಮುತುವರ್ಜಿಯಲ್ಲಿ ಸಂಪೂರ್ಣ ಡಾಮರೀಕರಣ ಹಾಗೂ ಜೀವೆಯಿಂದ ಕಾಂಪ್ರಬೈಲ್ ವರೆಗೆ ಕಾಂಕ್ರೀಟೀಕರಣ ಮಾಡಲಾಗಿತ್ತು. ಆದರೆ ಕಳೆದ ನವಂಬರ್ ತಿಂಗಳಲ್ಲಿ ಸುಸ್ಥಿತಿಯಲ್ಲಿದ್ದ ಈ ರಸ್ತೆಯನ್ನು ಅಭಿವೃದ್ಧಿ ಹಾಗೂ ಅಗಲೀಕರಣದ ನೆಪದಲ್ಲಿ ರಸ್ತೆಗೆ ಹೊಂದಿಕೊಂಡಿದ್ದ ಖಾಸಗಿ ಜಾಗದ ಮಾಲಿಕರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳದೆ ಪ್ರಭಾವಿಗಳ ಹೆಸರು ಬಳಸಿಕೊಂಡು ಏಕಾ ಏಕಿ ಅಗೆದು ಹಾಕಲಾಗಿದೆ. ಅದರಲ್ಲೂ ಕೆಲವು ಕಡೆ ಅತಿರೇಕವೆಂಬಂತೆ ಬೆದರಿಕೆ ತಂತ್ರ ಬಳಸಿ ರಸ್ತೆ ಬದಿಯ ಫಲಭರಿತ ಸುಮಾರು 50 ರಷ್ಟು ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಡಿಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕುರ್ಮಾನ್ ನಿಂದ ಕಶೆಕೋಡಿವರೆಗೆ ಸುಮಾರು 3 ಕಿಲೋಮೀಟರ್ ಉದಕ್ಕಿದ್ದ ರಸ್ತೆಯ ಸುಮಾರು 50 ಲೋಡಿನಷ್ಟು ಡಾಮರನ್ನು ಏಕಾಏಕಿ ಅಗೆದು ಕೆಲ ಖಾಸಗಿ ವ್ಯಕ್ತಿಗಳು ತಮ್ಮ ಮನೆ ಸಂಪರ್ಕಿಸುವ ಖಾಸಗಿ ರಸ್ತೆಗೆ ಮುಲಾರು ಎಂಬಲ್ಲಿ ಹಾಕಿಸಿ ಕೊಂಡಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಬಾಳ್ತಿಲ ಗ್ರಾಮ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಯವರಲ್ಲಿ ವಿಚಾರಿಸಿದರೆ ನಮಗೂ ಈ ರಸ್ತೆ ಕಾಮಗಾರಿಗೂ ಯಾವುದೇ ಸಂಬಂಧವಿಲ್ಲ ಎಂಬ ದಾಟಿಯಲ್ಲಿ ಉಡಾಫೆಯಾಗಿ ಉತ್ತರಿಸುತ್ತಾರೆ ಎಂಬ ಆಕ್ರೋಶ ಸ್ಥಳೀಯರದ್ದು.
ಗ್ರಾಮ ಪಂಚಾಯತಿನ 16 ಮಂದಿ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿರುವುದು ಕೂಡಾ ಸಂಶಯಕ್ಕೆಡೆಮಾಡಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಾರೆ.
ಇದೀಗ ಈ ರಸ್ತೆ ಅಗೆದು ಹಾಕಿ 7 ತಿಂಗಳು ಕಳೆದರೂ ಯಾವುದೇ ಕೆಲಸ ಕಾರ್ಯಗಳು, ಕಾಮಗಾರಿಗಳೂ ನಡೆಯುತ್ತಿಲ್ಲ. ಶಾಸಕರೂ ಈ ಬಗ್ಗೆ ಸ್ಥಳೀಯರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಜನ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಗುತ್ತಿಗೆದಾರ ಪ್ರೀತಂ ಎಂಬವರು ಈ ರಸ್ತೆಯನ್ನು ಅಗೆದು ಹಾಕಿದ್ದು, ಯಾರ ಅನುಮತಿ ಪ್ರಕಾರ ಈ ರಸ್ತೆ ಅಗೆದು ಹಾಕಿದ್ದಾರೆ ಎಂಬುದಕ್ಕೂ ಉತ್ತರವಿಲ್ಲ ಎನ್ನುವ ಗ್ರಾಮಸ್ಥರು ಈ ಕಾಮಗಾರಿಗೆ ಯಾವ ಇಲಾಖೆಯಿಂದ ಟೆಂಡರ್ ಆಗಿದೆ ಎಂಬ ಪ್ರಶ್ನೆಗೂ ಯಾರ ಬಳಿಯೂ ಉತ್ತರವಿಲ್ಲದಂತಾಗಿದೆ.
ಯಾರಲ್ಲು ಕೇಳಿದರೂ ಈ ಅವ್ಯವಸ್ಥೆ ಬಗ್ಗೆ ಯಾವುದೇ ಉತ್ತರವಿಲ್ಲ. ರಸ್ತೆ ಅವ್ಯವಸ್ಥೆಯಿಂದ ಇಲ್ಲಿನ ನಾಗರಿಕರು ತೀರಾ ಅಸಹಾಕ ಸ್ಥಿತಿಯಲ್ಲಿದ್ದು, ಯಾರಲ್ಲೂ ಪ್ರಶ್ನೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ. ಗ್ರಾಮ ಪಂಚಾಯತಿನಿಂದ ಹಿಡಿದು, ಶಾಸಕರು, ಸಂಸದರು, ರಾಜ್ಯ ಸರಕಾರ, ಕೇಂದ್ರ ಸರಕಾರ ಎಲ್ಲ ಅಧಿಕಾರವೂ ಒಂದೇ ಪಕ್ಷದ ಕೈಯಲ್ಲೇ ಇದ್ದರೂ ಒಂದು ಗ್ರಾಮದ ಜನರ ರಸ್ತೆ ಅವ್ಯವಸ್ಥೆಯ ಬೇಡಿಕೆ ಸ್ಪಂದಿಸಲಾರದ ಸ್ಥಿತಿ ಬಂದಿದೆ ಎಂದರೆ ಗ್ರಾಮಸ್ಥರ ದೌರ್ಭಾಗ್ಯ ಎನ್ನದೆ ವಿಧಿಯಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಿ ಗ್ರಾಮಸ್ಥರ ನರಕಸದೃಶ ಪರಿಸ್ಥಿತಿಗೆ ಪರಿಹಾರ ಕಲ್ಪಿಸಿ ಜನರಿಗೆ ನೆಮ್ಮದಿಯ ಸಂಚಾರಕ್ಕೆ ವ್ಯವಸ್ಥೆ ಕೊಡುವಂತೆ ಆಗ್ರಹಿಸಿರುವ ಗ್ರಾಮಸ್ಥರು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಸಂಗ್ರಹಿಸುವುದಾಗಿ ಎಚ್ಚರಿಸಿದ್ದಾರೆ.
ಮಣ್ಣಿನ ಕಚ್ಚಾ ರಸ್ತೆಗೆ 3,000 ರೂಪಾಯಿಯ 1 ಲೋಡ್ ಜಲ್ಲಿ ಕಲ್ಲು ಹುಡಿ ಹಾಕಲು ಪಂಚಾಯತ್ ಬಳಿ ಹಣ ಇಲ್ಲ ಎಂದು ಉತ್ತರಿಸಿದವರಿಂದ ರಸ್ತೆಗೆ ಕಾಂಕ್ರೀಟ್ ಅಪೇಕ್ಷೆ ಮಾಡಬಹುದೇ?...
ReplyDelete