ಬಂಟ್ವಾಳ, ಜುಲೈ, 21, 2021 (ಕರಾವಳಿ ಟೈಮ್ಸ್) : ಲೋಕಾಂತ್ಯದ ವೇಳೆಗೆ ಅಲ್ಲಾಹನು ಮಾನವ ಸಮೂಹಕ್ಮೆ ಮಾರಕ ಕಾಯಿಲೆಗಳು ಹಾಗೂ ಭಯದ ವಾತಾವರಣ ಉಂಟು ಮಾಡುವ ಮೂಲಕ ಕಠಿಣ ಪರೀಕ್ಷೆ ಮಾಡುವನು ಎಂಬುದನ್ನು 1400 ವರ್ಷಗಳ ಹಿಂದೆಯೇ ಪವಿತ್ರ ಕುರ್ ಆನ್ ಮೂಲಕ ಕಠಿಣ ಶಬ್ದಗಳಲ್ಲಿ ಎಚ್ಚರಿಸಲಾಗಿದೆ ಎಂದು ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುಸರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು.
ಬಕ್ರೀದ್ ಪ್ರಯುಕ್ತ ಮಸೀದಿಯಲ್ಲಿ ನಡೆದ ಸರಳ ಈದ್ ಪ್ರಾರ್ಥನೆ ಹಾಗೂ ಖುತುಬಾಕ್ಕೆ ನೇತೃತ್ವ ನೀಡಿದ ಬಳಿಕ ಈದ್ ಸಂದೇಶ ನೀಡಿ ಮಾತನಾಡಿದ ಅವರು ಪವಿತ್ರ ಕುರ್ ಆನ್ ನಿತ್ಯ ನಿರಂತರವಾಗಿ ಪಾರಾಯಣ ಮಾಡುತ್ತಿರುವ ವಿಶ್ವಾಸಿಗಳ ಪಾಲಿಗೆ ಇಂದಿನ ಯಾವುದೇ ಕಠಿಣ ಪರೀಕ್ಷೆಗಳೂ ಕೂಡಾ ಅನಿರೀಕ್ಷಿತವಾಗಿರದೆ ಎಲ್ಲವೂ ನಿರೀಕ್ಷಿತವಾಗಿದೆ ಎಂದರು.
ಲೋಕಕ್ಕೆ ಬಂದೆರಗಿರುವ ಮಾರಕ ಕಾಯಿಲೆ ಕೊರೋನಾ ಹಿನ್ನಲೆಯಲ್ಲಿ ಸರಕಾರ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವ ಮೂಲಕ ಜಾಗರೂಕತೆ ವಹಿಸುವುದರ ಜೊತೆಗೆ ಪ್ರೌಢತೆ ಮೆರೆಯುವಂತೆ ಇದೇ ವೇಳೆ ಉಸ್ತಾದರು ಕರೆ ನೀಡಿದರು.
ಕೊರೋನಾ ಹಿನ್ನಲೆಯಲ್ಲಿ ಆರಾಧನಾ ಸ್ಥಳಗಳಲ್ಲಿ ನಿರ್ಬಂಧ ಹೇರಲ್ಪಟ್ಟರೂ ಸರಕಾರದ ನೀತಿ-ನಿಯಮ ಪಾಲಿಸಿ ಕೈಗೊಳ್ಳುವ ಆರಾಧನೆಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ಕೈಗೊಳ್ಳುವ ಪ್ರತಿಫಲವನ್ನು ಅಲ್ಲಾಹು ನೀಡುವನು ಎಂದವರು ಹೇಳಿದರು.
0 comments:
Post a Comment