ಬಂಟ್ವಾಳ, ಜುಲೈ 24, 2021 (ಕರಾವಳಿ ಟೈಮ್ಸ್) : ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿರುವ ತಾಲೂಕಿನ ಪ್ರಭಾವಿ ದಲಿತ ಮುಖಂಡ, ಅಮ್ಟೂರು ಗ್ರಾಮದ ಕೃಷ್ಣಾಪುರ ನಿವಾಸಿ ಭಾನುಚಂದ್ರ ಕೃಷ್ಣಾಪುರ ಅವರ ಅಕಾಲಿಕ ಅಗಲಿಕೆ ತುಂಬಲಾರದ ನಷ್ಟ ಎಂದು ತಾಲೂಕು ಆದಿ ದ್ರಾವಿಡ ನೌಕರರ ಸಂಘ ಸಂತಾಪ ಸೂಚಿಸಿದೆ.
ಶನಿವಾರ ಬಿ ಸಿ ರೋಡಿನಲ್ಲಿ ಏರ್ಪಡಿಸಲಾದ ಸಂತಾಪ ಸೂಚಕ ಹಾಗೂ ಶ್ರದ್ದಾಂಜಲಿ ಅರ್ಪಣಾ ಸಭೆಯಲ್ಲಿ ಈ ಸಂತಾಪ ವ್ಯಕ್ತಪಡಿಸಲಾಯಿತು.
ಭಾನುಚಂದ್ರ ಅವರು ಬಂಟ್ವಾಳ ತಾಲೂಕು ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಜನಪ್ರತಿಯ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರಾಗಿ, ಹಲವು ದಲಿತಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮುದಾಯದ ಮಂದಿಗೆ ಆಗುತ್ತಿದ್ದ ಅನ್ಯಾಯದ ವಿರುದ್ದವಾಗಿ ಮುಂಚೂಣಿಯಲ್ಲಿದ್ದು ನ್ಯಾಯ ವಂಚಿತ ದಲಿತರ ಧ್ವನಿಯಾಗಿದ್ದ ಇವರು ಸಾಮಾಜಿಕ, ರಾಜಕೀಯ ರಂಗದಲ್ಲೂ ಸಕ್ರಿಯರಾಗಿದ್ದುಕೊಂಡು ಸಮಾಜದ ಬಡವರ-ನ್ಯಾಯವಂಚಿತರ ಪರವಾಗಿ ಸದಾ ಕೆಲಸ ಮಾಡಿಕೊಂಡಿದ್ದರು ಎಂದು ಸಂತಾಪ ಸೂಚಕ ಸಭೆಯಲ್ಲಿ ಸ್ಮರಿಸಿಕೊಳ್ಳಲಾಯಿತು.
ಭಾನುಚಂದ್ರ ಅವರ ಅಕಾಲಿಕ ಅಗಲಿಕೆ ಈ ಸಮಾಜಕ್ಕೆ ಹಾಗೂ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್, ಬಂಟ್ವಾಳ ತಾಲೂಕು ಆದಿ ದ್ರಾವಿಡ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ಕಾರ್ಯದರ್ಶಿ ವೆಂಕಟೇಶ್ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿ ರಾಜೀವ್ ಕಕ್ಕೆಪದವು, ಮಾನವ ಬಂಧುತ್ವ ವೇದಿಕೆ ರಾಜ್ಯ ಸದಸ್ಯ ರಾಜ ಚೆಂಡ್ತಿಮಾರ್, ದಲಿತ ಮುಖಂಡರಾದ ಹೊನ್ನಪ್ಪ ಕುಂದರ್, ಸತೀಶ್ ಅರಳ, ತಾಲೂಕು ಮರಾಠಿ ಸಂಘದ ಅಧ್ಯಕ್ಷ ಕೇಶವ ನಾಯ್ಕ್, ಪ್ರಮುಖರಾದ ಬೇಬಿ ಮೈರಾನ್ ಪಾದೆ, ಚಂದ್ರಹಾಸ ಅರ್ಬಿಗುಡ್ಡೆ, ಮೋಹನ್ ಬಡಗ ಬೆಳ್ಳೂರು, ಐತಪ್ಪ ಮಡಿವಾಳ ಪಡ್ಪು , ಉಮೇಶ್ ಕೃಷ್ಣಾಪುರ, ಜಿನ್ನಪ್ಪ ಕೃಷ್ಣಾಪುರ, ನಾರಾಯಣ ನಂದಾವರ, ಪ್ರೀತುರಾಜ್ ಪಲ್ಲಮಜಲು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment