ಮಂಗಳೂರು, ಜುಲೈ 22, 2021 (ಕರಾವಳಿ ಟೈಮ್ಸ್) : ಆಧಾರ್ ಮೊಬೈಲ್ ಜೋಡಣೆಯ ಸೇವೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಯುಐಡಿಎಐ ಸಹಾಯದೊಂದಿಗೆ ಅಂಚೆ ಇಲಾಖೆ ತನ್ನ ಪೋಸ್ಟ್ ಮ್ಯಾನ್ ಸಿಬಂದಿಗಳ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಹೊಸ ಯೋಜನೆಯನ್ನು ರೂಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯನ್ನು ಈಗಾಗಲೇ ಜುಲೈ 15 ರಿಂದ ಹಂತ ಹಂತವಾಗಿ ಪ್ರಾರಂಭಿಸಲಾಗಿದೆ.
ಅಂಚೆ ಇಲಾಖೆಯ ಸಿಬ್ಬಂದಿಯ ಬಳಿ ಇರುವ ಮೊಬೈಲ್ ಮೂಲಕ ಆಧಾರ್ ಸೇವೆಯನ್ನು ನೀಡಲು ಆರಂಭಿಸಲಾಗಿದೆ. ಮೊದಲನೆಯದಾಗಿ ಅಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸುವ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸೇವೆಗೆ ಕೇವಕ 50/- ರೂಪಾಯಿ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಮುಂದಿನ ದಿನಗಳಲ್ಲಿ 5 ವರ್ಷದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ ಕೂಡ ಪ್ರಾರಂಭಿಸಲಾಗುವುದು.
ಆಧಾರ್ ಸೇವೆಯನ್ನು ಅಂಚೆ ಇಲಾಖೆಯ ವತಿಯಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸು ವುದು ಈ ಯೋಜನೆಯ ಉದ್ದೇಶವಾಗಿದ್ದು, ಗ್ರಾಹಕರು ಅಂಚೆ ಬಟವಾಡೆಗೆ ಬರುವ ನೌಕರರನ್ನು ಅಥವಾ ಹತ್ತಿರದ ಕಚೇರಿಗೆ ಸಂಪರ್ಕಿಸಿ ಸೇವೆಯನ್ನು ಮನೆ ಬಾಗಿಲಲ್ಲಿ ಪಡೆಯಬಹುದು.
ಪ್ರಸ್ತುತ ತಮ್ಮ ಆಧಾರ್ ಕಾರ್ಡಿನಲ್ಲಿ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸದೇ ಇರುವವರು, ಪ್ರಸ್ತುತ ತಮ್ಮ ಆಧಾರ್ ಕಾರ್ಡಿನಲ್ಲಿ ಆಧಾರ್ ಸಂಖ್ಯೆಗೆ ಜೊಡಿಸಿರುವ ಮೊಬೈಲ್ ಸಂಖ್ಯೆಯ ಬದಲಿಗೆ ಬೇರೆ/ ಹೊಸ ಮೊಬೈಲ್ ಸಂಖ್ಯೆ ಜೋಡಿಸಬಯಸುವವರು, ಪ್ರಸ್ತುತ ತಮ್ಮ ಆಧಾರ್ ಕಾರ್ಡಿನಲ್ಲಿ ಆಧಾರ್ ಸಂಖ್ಯೆಗೆ ತಮ್ಮ ಪೋಷಕರ ಮೊಬೈಲ್ ಸಂಖ್ಯೆಯನ್ನು ಜೋಡಿಸಿದ್ದು, ಈಗ ತಮ್ಮದೇ ನಂಬರನ್ನು ಜೋಡಿಸಲು ಬಯಸುವ ವಿದ್ಯಾರ್ಥಿಗಳು, ವಿವಿಧ ಆಧಾರ್ ಆಧಾರಿತ ಯೋಜನೆಗಳ ಫಲಾನುಭವ ಪಡೆಯುವ ಪ್ರಸ್ತುತ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲಿನಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಒಟಿಪಿ ಬಾರದಿರುವ ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಬೇರೆ ಮೊಬೈಲ್ ಸಂಖ್ಯೆ ಜೋಡಿಸಲು ಬಯಸುವವರು, ಮೊಬೈಲ್ ಸಿಮ್ ಕಳೆದು ಹೋಗಿ ಬದಲಾಯಿಸಿದವರು, ಬೀಡಿ ಕಾರ್ಮಿಕರು/ ಇತರರು ಪಿಎಫ್ ಸೌಲಭ್ಯ ಪಡೆಯುವ ಉದ್ದೇಶದಿಂದ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ತುರ್ತಾಗಿ ಜೋಡಿಸಬೇಕಾಗಿರುವವರು, ಪಡಿತರ ಚೀಟಿಯಲ್ಲಿ ಒಟಿಪಿ ಬಾರದ ಸಮಸ್ಯೆ ಇರುವವರು, ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲಿಚ್ಚಿಸುವವರು/ ಆದಾಯ ವಿವರ ಸಲ್ಲಿಸುವವರು ಒಟಿಪಿ ಸಮಸ್ಯೆ ಇದ್ದಲ್ಲಿ ಗ್ರಾಹಕರು ಅನುಕೂಲಕ್ಕಾಗಿ ತಮ್ಮ ಅಂಚೆ ಕಚೇರಿ ಅಥವಾ ಅಂಚೆ ಪೋಸ್ಟ್ ಮ್ಯಾನ್ ಗಳನ್ನು ಸಂಪರ್ಕಿಸಿ ಈ ಹೊಸ ಆಧಾರ್ ಸೇವೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment