ಬೆಂಗಳೂರು, ಜುಲೈ 20, 2021 (ಕರಾವಳಿ ಟೈಮ್ಸ್) : ಕೊರೋನಾ 2ನೇ ಅಲೆ ಹಾಗೂ ಲಾಕ್ ಡೌನ್ ಕಾರಣದಿಂದ ಸಂಪೂರ್ಣವಾಗಿ ರದ್ದುಗೊಂಡಿದ್ದ 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಫಲಿತಾಂಶ ಹಾಗೂ ದ್ವಿತೀಯ ಪಿಯುಸಿ ಕೃಪಾಂಕ ಮಾರ್ಗಸೂಚಿ ಅನುಸರಿಸಿ ಬುಧವಾರ ಸಂಜೆ ಪ್ರಕಟಿಸಲಾಗಿದ್ದು, ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಿದ್ದಾರೆ.
ಫ್ರೆಶರ್ಸ್ ಜೊತೆ ರಿಪೀಟರ್ಸ್ ವಿದ್ಯಾರ್ಥಿಗಳೂ ಕೂಡಾ ಈ ಬಾರಿ ಸೆಕೆಂಡ್ ಪಿಯುಸಿ ಪಾಸಾಗಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಪ್ರಕಟಿಸಿದರು. ರಾಜ್ಯದಲ್ಲಿ ಒಟ್ಟಾರೆ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 3,35,138 ವಿದ್ಯಾರ್ಥಿಗಳು ಹಾಗೂ 3,31,359 ವಿದ್ಯಾರ್ಥಿನಿಯರಿದ್ದು, ಈ ಮೂಲಕ ಈ ಬಾರಿ ಬಾಲಕರು ಮೇಲುಗೈ ಸಾಧಿಸಿದಂತಾಗಿದೆ.
1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 2,52,056 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. 1,47,055 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ ಪಡೆದಿದ್ದು, ಜಿಲ್ಲೆಯ 445 ವಿದ್ಯಾರ್ಥಿಗಳು 600 ರಲ್ಲಿ 600 ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಎರಡನೇ ಸ್ಥಾನದಲ್ಲಿದ್ದು, 302 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರು ಉತ್ತರದ 261 ವಿದ್ಯಾರ್ಥಿಗಳು, ಉಡುಪಿಯ 149 ವಿದ್ಯಾರ್ಥಿಗಳು, ಹಾಸನದ 104 ವಿದ್ಯಾರ್ಥಿಗಳು 600 ಅಂಕಗಳನ್ನು ಪಡೆದಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
0 comments:
Post a Comment