ಬೆಂಗಳೂರು, ಜುಲೈ 16, 2021 (ಕರಾವಳಿ ಟೈಮ್ಸ್) : 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20 ರಂದು ಮಂಗಳವಾರ ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್ ತಿಳಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಅಂಕ ಆಧಾರಿತ ಫಲಿತಾಂಶವನ್ನೇ ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ಜುಲೈ 20 ರಂದು ಇಲಾಖೆಯ ವೆಬ್‍ಸೈಟ್‍ನಲ್ಲೇ ಫಲಿತಾಂಶ ಪ್ರಕಟಿಸಲಾಗುವುದು. ಪ್ರತಿ ವರ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆ ಆಧರಿಸಿ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪಡೆಯುತ್ತಿದ್ದರು. ಆದರೆ, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯೇ ನಡೆಯದ ಕಾರಣ ವಿದ್ಯಾರ್ಥಿಗಳ ಬಳಿ ಪರೀಕ್ಷಾ ನೋಂದಣಿ ಸಂಖ್ಯೆ ಇರುವುದಿಲ್ಲ. ಪ್ರಸ್ತುತ ವರ್ಷ ಇಲಾಖೆಯು ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಸೃಜಿಸಿದ್ದು, ಅದನ್ನು ಇಲಾಖಾ ವೆಬ್‍ಸೈಟ್ ಮೂಲಕವೇ ಪಡೆದುಕೊಳ್ಳಲು ಶುಕ್ರವಾರದಿಂದ ಅವಕಾಶ ಮಾಡಿಕೊಡಲಾಗುವುದು. ಈ ಸಂಬಂಧ ಇಲಾಖಾ ವೆಬ್‍ಸೈಟ್‍ನಲ್ಲಿ Know registration number ಎಂಬ ಲಿಂಕ್ ನೀಡಿ ಅದರ ಮೂಲಕ ಪ್ರತಿ ವಿದ್ಯಾರ್ಥಿಯೂ ತಮ್ಮ ನೋಂದಣಿ ಸಂಖ್ಯೆ ಪಡೆದುಕೊಳ್ಳಬಹುದು. ಈ ಬಗ್ಗೆ ವಿದ್ಯಾರ್ಥಿಗಳ ಮೊಬೈಲ್, ಇ-ಮೇಲ್‍ಗೂ ಅದರ ಲಿಂಕ್ ಕಳಿಸಿಕೊಡಲಾಗುವುದು ಎಂದವರು ಮಾಹಿತಿ ನೀಡಿದರು.
ಕೋವಿಡ್ 2ನೇ ಅಲೆ ಹಾಗೂ ಲಾಕ್ ಡೌನ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸರಕಾರ ರದ್ದುಪಡಿಸಿತ್ತು. ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ನೀಡುವುದಾಗಿ ತಿಳಿಸಿತ್ತು. ಅದರಂತೆ ಇದೀಗ ದ್ವಿತೀಯ ಪಿಯುಸಿ ಫಲಿತಾಂಶ ಸಿದ್ದಗೊಂಡಿದ್ದು, ಪ್ರಕಟಣೆಗೆ ದಿನಗಣನೆ ನಡೆಯುತ್ತಿದೆ.
0 comments:
Post a Comment