ಕಡಬ, ಜೂನ್ 30, 2021 (ಕರಾವಳಿ ಟೈಮ್ಸ್) : ತಾಲೂಕಿನ ಕೌಕ್ರೌಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಟ್ಯಾಂಕರ್ ಗಳಿಂದ ಫರ್ನೇಸ್ ಎಣ್ಣೆ ಕಳ್ಳತನ ಮಾಡಿ ಅಕ್ರಮ ದಾಸ್ತಾನು ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಪುತ್ತೂರು ಎಎಸ್ಪಿ ಗಾನ ಕುಮಾರ್ ನೇತೃತ್ವದಲ್ಲಿ ಪುತ್ತೂರು ಹಾಗೂ ಉಪ್ಪಿನಂಗಡಿ ಪೊಲೀಸರು ಮಂಗಳವಾರ ಕಡಬ ತಹಶೀಲ್ದಾರ್ ಹಾಗೂ ನೆಲ್ಯಾಡಿ ಗಣಿ ಭೂ ವಿಜ್ಞಾನ ಇಲಾಖಾಧಿಕಾರಿಗಳ ಜೊತೆ ದಾಳಿ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳ ಸಹಿತ ಆರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ರಘುನಾಥನ್, ಮುತ್ತು ಪಾಂಡಿ, ಜಿ ದಾಸ್ (37), ಸಿಂಗರಾಜ್ (42) , ಎಸ್ ಕಾರ್ತಿ (27), ಸೆಲ್ವರಾಜ್ (60) ಎಂದು ಹೆಸರಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಈ ದಾಳಿ ಸಂಘಟಿಸಿದ್ದು, ದಾಳಿ ವೇಳೆ ಎರಡು ಟ್ಯಾಂಕರ್‍ಗಳು ನಿಂತುಕೊಂಡಿದ್ದು, ಜೊತೆಗೆ 4 ಜನರು ಟ್ಯಾಂಕರ್‍ನಿಂದ ಪಂಪು ಮೂಲಕ ಟ್ಯಾಂಕರ್ ಗೆ ಮತ್ತು ನೆಲ ಟಾಂಕ್‍ಗಳಿಂದ ಪಂಪು ಮೂಲಕ ಟ್ಯಾಂಕರ್‍ಗೆ ಫರ್ನೇಸ್ ಆಯಿಲನ್ನು ಲೋಡ್ ಹಾಗೂ ಅನ್ ಲೋಡ್ ಮಾಡುತ್ತಿದ್ದು, ಪೆÇಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ್ದಾರೆ.
ಆರೋಪಿಗಳು ಮುತ್ತು ಪಾಂಡಿ ಮತ್ತು ರಘುನಾಥನ್ ರೊಡನೆ ಸೇರಿಕೊಂಡು ಮಂಗಳೂರು- ಬೆಂಗಳೂರು ಮಾರ್ಗವಾಗಿ ಸಾಗುವ ಕೆಲವು ಫರ್ನೆಸ್ ಆಯಿಲ್ ಟ್ಯಾಂಕರ್ ಗಳ ಚಾಲಕರೊಂದಿಗೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡು ಟ್ಯಾಂಕರ್‍ಗಳನ್ನು ತಮ್ಮ ಸ್ವ ಸ್ಥಳಕ್ಕೆ ಕರೆಯಿಸಿಕೊಂಡು ಅವುಗಳಿಂದ ಸುಮಾರು 50 ರಿಂದ 200 ಲೀಟರ್‍ವರೆಗೆ ಆಯಿಲನ್ನು ಕಳ್ಳತನ ಮಾಡಿ ಅವರ ಸ್ಥಳದಲ್ಲಿರುವ ಭೂಗತ ಟ್ಯಾಂಕ್‍ಗಳಲ್ಲಿ ಸಂಗ್ರಹಿಸಿ ಹೆಚ್ಚು ಸಂಗ್ರಹಣೆ ಆದ ನಂತರ ಮಾಲಿಕರ ಖಾಲಿ ಟ್ಯಾಂಕರ್‍ಗಳಲ್ಲಿ ತುಂಬಿಸಿ ಇತರೇ ಸ್ಥಳಗಳಿಗೆ ಸೂಕ್ತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವುದು ತಿಳಿದುಬಂದಿದೆ.
ಮಂಗಳೂರು-ಬೆಂಗಳೂರು ಮಾರ್ಗವಾಗಿ ಸಾಗುವ ಫರ್ನೆಸ್ ಆಯಿಲ್ ಟ್ಯಾಂಕರ್‍ಗಳ ಚಾಲಕರಿಗೆ ಹಣವನ್ನು ನೀಡಿ ಮಾಲೀಕರ ಗಮನಕ್ಕೆ ತರದೇ ಮಾಲಿಕರಿಗೆ ವಂಚಿಸಿ ನಷ್ಟವನ್ನುಂಟು ಮಾಡಿರುವುದಲ್ಲದೇ, ಕಳ್ಳತನ ಮಾಡಿ ಸಂಗ್ರಹಿಸಿಟ್ಟು ಫರ್ನೇಸ್ ಆಯಿಲನ್ನು ಟ್ಯಾಂಕರ್ ಮೂಲಕ ಚೆನ್ನೈ ಕಡೆಗೆ ಸಾಗಾಟ ಮಾಡುವುದಾಗಿ ಇದನ್ನು ಮುತ್ತು ಪಾಂಡಿ ಮತ್ತು ರಘನಾಥನ್ ಎಂಬಿಬ್ಬರು ನಡೆಸಿರುವುದಾಗಿ ತಿಳಿಸಿದ್ದಾರೆ.
ದಾಳಿ ವೇಳೆ ನೆಲದ ಅಡಿಯಲ್ಲಿ ನಿರ್ಮಿಸಿದ 2 ಟಾಂಕುಗಳ 4 ಕಂಪಾರ್ಟ್‍ಮೆಂಟ್‍ಗಳಿಂದ ಸುಮಾರು 10,500 ಲೀಟರ್ ದಾಸ್ತಾನು ಇರಿಸಿದ ಫರ್ನಿಶ್ ಆಯಿಲನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸ್ಥಳದಲ್ಲಿದ್ದ ಎರಡು ಟ್ಯಾಂಕರ್ ಪೂರ್ಣ ಪ್ರಮಾಣದಲ್ಲಿ ತುಂಬಿಸಿ ಟ್ಯಾಂಕರ್ ವಾಹನಗಳೆರಡನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೃತ್ಯಕ್ಕೆ ಬಳಸಿದ ಪಂಪ್ ಸೆಟ್ ಗಳು, 2 ಆಯಿಲ್ ಮಿಶ್ರಣ ಮಾಡಲು ಉಪಯೋಗಿಸುವ ಸಲಕರಣೆಗಳು, 25 ಲೀಟರ್ ತಗಡಿನ 2 ಕ್ಯಾನ್, 1 ಅಳತೆ ಗೇಜ್ ರಾಡ್, ಮೋಟಾರ್ ಸೈಕಲ್, 24 ಸಾವಿರ ರೂಪಾಯಿ ನಗದು ಹಣ, ಮನೆ ಮತ್ತು ಸ್ಥಳದ ಅಗ್ರಿಮೆಂಟ್ ಪ್ರತಿ, ನಕ್ಷೆ ಪ್ರತಿ, ಕೌಕ್ರಾಡಿ ಪಂಚಾಯಿತಿನಿಂದ ಪಡೆದ ಕಟ್ಟಡ ಅಳತೆ ಕಾರ್ಯದ ಪತ್ರ, ಆರೋಪಿತರಿಗೆ ಸಂಬಂದಿಸಿದ ವಿವಿಧ ಮಾದರಿಯ ಒಟ್ಟು 5 ಮೊಬೈಲ್ ಸೆಟ್‍ಗಳು, ಕೆನರಾ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿದ ಕೌಂಟರ್ ರಶೀದಿ ಇತ್ಯಾದಿ ಸೇರಿ ಒಟ್ಟು 35,21,400/- ರೂಪಾಯಿ ಅಂದಾಜು ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2021 ಕಲಂ 379, 417, 420, 287 ಐಪಿಸಿ ಮತ್ತು ಕಲಂ 23 ಪೆಟ್ರೋಲಿಯಮ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
0 comments:
Post a Comment