ಬೆಂಗಳೂರು, ಜೂನ್ 17, 2021 (ಕರಾವಳಿ ಟೈಮ್ಸ್) : ದೇಶದ ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪನ್ನಗಳ ಕ್ಷೇತ್ರದಲ್ಲಿ ಮೂಂಚೂಣಿ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್ಗಳನ್ನು ಘೋಷಿಸುವ ಮೂಲಕ ರಾಜ್ಯದ ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪಾದನಾ ಘಟಕಗಳಿಗೆ ಉತ್ತೇಜನ ನೀಡುವಂತೆ ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಅವರಿಗೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ರೌಂಡ್ ಟೇಬಲ್ ವೆಬಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರಕಾರ ದೇಶದಲ್ಲಿ ರಕ್ಷಣಾ ಹಾಗೂ ಏರೋಸ್ಪೇಸ್ ಗೆ ಸಂಬಂಧಿಸಿದಂತಹ ಕ್ಷೇತ್ರಗಳಿಗೆ ಹಲವಾರು ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ. ರಕ್ಷಣಾ ಉತ್ಪಾದನಾ ಕಾರಿಡಾರ್ ಯೋಜನೆ ಯ ಮೂಲಕ ಉತ್ತರ ಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಕ್ರಮವಾಗಿ 6 ಮತ್ತು 5 ನೋಡ್ ಗಳನ್ನು ಉತ್ತೇಜಿಸುವ ಕಾರ್ಯಕ್ಕೆ ಮುಂದಾಗಿದೆ. ಹೊಸ ರಕ್ಷಣಾ ಕಾರಿಡಾರ್ ಗಳನ್ನು ನಿರ್ಮಿಸುವುದರ ಜೊತೆಯಲ್ಲೇ, ಈಗಾಗಲೇ ಅಸ್ತಿತ್ವದಲ್ಲಿರುವ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಪರಿಸರವನ್ನು ಹೊಂದಿರುವ ಪ್ರದೇಶಗಳಿಗೂ ಉತ್ತೇಜನ ನೀಡಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್ ನಿರ್ಮಾಣಕ್ಕೆ ಎಲ್ಲಾ ರೀತಿಯ ಅನುಕೂಲವಿದ್ದು ಉತ್ತಮ ಪರಿಸರವಿದೆ. ರಾಜ್ಯದಲ್ಲಿ ಅತ್ಯುತ್ತಮ ಸಂಶೋಧನೆ ಮತ್ತು ಅಭಿವೃದ್ದಿಯ ಕೇಂದ್ರಗಳು ಇವೆ. ಅಲ್ಲದೆ, ಹೆಚ್ಎಎಲ್, ಬಿಇಎಲ್ ನಂತಹ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಮತ್ತು ಡಿಆರ್ಡಿಓದ ಪ್ರಯೋಗಾಲಯಗಳಾದ ಡಿಏಆರ್ಇ ಮತ್ತು ಎಡಿಇ ಗಳಿವೆ. ಏರ್ಬಸ್, ಬೋಯಿಂಗ್, ಜಿಈ ಏವಿಯೇಷನ್ ನಂತಹ ಪ್ರಮುಖ ಕಂಪನಿಗಳು ರಾಜ್ಯದಲ್ಲಿವೆ. ಇದು ನಮ್ಮ ರಾಜ್ಯವನ್ನು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂದು ಹೇಳಿದರು.
ದೇಶದ ಶೇಕಡಾ 25ಕ್ಕೂ ಹೆಚ್ಚು ಏರ್ಕ್ರಾಫ್ಟ್ ಮತ್ತು ಸ್ಪೇಸ್ಕ್ರಾಫ್ಟ್ ಕೈಗಾರಿಕೆಗಳು ರಾಜ್ಯದಲ್ಲಿವೆ. ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಶೇಕಡಾ 67ರಷ್ಟು ಏರ್ಕ್ರಾಫ್ಟ್ ಮತ್ತು ಹೆಲಿಕ್ಯಾಪ್ಟರ್ ಉತ್ಪಾದನೆ ರಾಜ್ಯದಲ್ಲಿ ನಡೆಯುತ್ತದೆ. ಅಲ್ಲದೆ ಎಫ್ಡಿಐ ಇಂಟಲಿಜೆನ್ಸ್ ನ ವಿಶ್ವ ಏರೋಸ್ಪೇಸ್ ನಗರಗಳ ಸೂಚ್ಯಾಂಕದ ಮೊದಲ 10ನೇ ಸ್ಥಾನದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದುಕೊಂಡಿದೆ. ಹಾಗೆಯೇ, ಈ ಕ್ಷೇತ್ರಕ್ಕೆ ಬಿಡಿ ಭಾಗಗಳನ್ನು ಪೂರೈಸುವ 2000ಕ್ಕೂ ಹೆಚ್ಚು ಎಂಎಸ್ಎಂಇಗಳಿವೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೇಶದಲ್ಲೇ ಮೊದಲು ಏರೋಸ್ಪೇಸ್ ಹಾಗೂ ಡಿಫೆನ್ಸ್ ಪಾಲಿಸಿಯನ್ನು ಜಾರಿಗೊಳಿಸಿದ ರಾಜ್ಯ ನಮ್ಮದಾಗಿದೆ ಎಂದರು.
ಬೆಂಗಳೂರು, ಮೈಸೂರು, ತುಮಕೂರು ಮತ್ತು ಚಾಮರಾಜನಗರ ಈ ನಾಲ್ಕೂ ನೋಡ್/ ಹಬ್ ಗಳು ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕೋಸಿಸ್ಟಮ್ ಗೆ ಈಗಾಗಲೇ ಸಿದ್ದವಿರುವ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಮುಂದಿನ ದಿನಗಳಲ್ಲೂ ಕರ್ನಾಟಕ ರಾಜ್ಯ ದೇಶದ ಏರೋಸ್ಪೇಸ್ ಮತ್ತು ಡೀಫೆನ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ ಎಂದರು.
ರಾಜ್ಯದಲ್ಲಿ ಘೋಷಣೆ ಆಗುವ ರಕ್ಷಣಾ ತಂತ್ರಜ್ಞಾನ ಹಬ್, ದೇಶದ ಡಿಫೆನ್ಸ್ ಆಫ್ಸೆಟ್ ಪಾಲಿಸಿ ಅಡಿಯಲ್ಲಿ ಡಿಫೆನ್ಸ್ ಕಾರಿಡಾರ್ ನ ವರ್ಧಿತ ಗುಣಕಗಳು ಹಾಗೂ ರಕ್ಷಣಾ ವೇದಿಕೆ ಮತ್ತು ಉತ್ಪನ್ನಗಳ ಪರೀಕ್ಷೆ ಮತ್ತು ಪ್ರಮಾಣ ಪತ್ರ ಮತ್ತಿತರ ವಿಶೇಷ ಸೌಲಭ್ಯಗಳಿಂದ ರಾಜ್ಯದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಅಲ್ಲದೆ, ಆತ್ಮನಿರ್ಭರ ಭಾರತ ಗುರಿಗೆ ಮತ್ತಷ್ಟು ಬಲ ತುಂಬಲಿದೆ. ಈ ಹೊಸ ಉಪಕ್ರಮಗಳಿಂದ ನಮ್ಮ ರಾಜ್ಯದ ವೈಜ್ಞಾನಿಕ ನಾಯಕತ್ವ ಹಾಗೂ ಈ ಕ್ಷೇತ್ರಕ್ಕೆ ನಮ್ಮ ರಾಜ್ಯದಿಂದ ನೀಡಿರುವ ಸಂಶೋಧನೆ ಮತ್ತು ಅಭಿವೃದ್ದಿಯ ಕೊಡುಗೆಗೆ ಸ್ವೀಕೃತಿ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಸತತ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಕೈಗಾರಿಕಾ ಅಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಮಾತನಾಡಿ, ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2021-2026 ರ ಕರಡು ಅಂಶಗಳನ್ನು ವಿವರಿಸಿದರು. ರಾಜ್ಯವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಕೈಗಾರಿಕಾ ಕ್ಷೇತ್ರದ ಪ್ರಮುಖ ಬಂಡವಾಳ ಹೂಡಿಕೆಯ ರಾಜ್ಯವನ್ನಾಗಿಸುವುದು ಪ್ರಮುಖ ಗುರಿಯಾಗಿದೆ. ರಾಜ್ಯದಲ್ಲಿ ರಕ್ಷಣಾ ಹಬ್ ಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ, ಬಂಡವಾಳ ಹೂಡಿಕೆಗೆ ಆಕರ್ಷಕವಾದ ಸೌಲಭ್ಯಗಳನ್ನು ಈ ನೀತಿ ಒಳಗೊಂಡಿರಲಿದೆ ಎಂದು ಹೇಳಿದರು.
ವೆಬಿನಾರ್ ನಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜಕುಮಾರ್ ಖತ್ರಿ, ಕೈಗಾರಿಕಾ ಇಲಾಖೆಯ ತಾಂತ್ರಿಕ ನಿರ್ದೇಶಕ ರಮೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.
0 comments:
Post a Comment