ಮಂಗಳೂರು, ಜೂನ್ 18, 2021 (ಕರಾವಳಿ ಟೈಮ್ಸ್) : ಇಡೀ ರಾಜ್ಯವೇ ಕೋವಿಡ್ ಮಹಾಮಾರಿಯ ಕಪಿಮುಷ್ಠಿಯಲ್ಲಿ ನಲುಗುತ್ತಿದ್ದು, ಬಹುತೇಕ ಕುಟುಂಗಳು ಒಂದೋ ತಮ್ಮವರನ್ನು ಕಳೆದುಕೊಂಡೋ ಅಥವಾ ಆರ್ಥಿಕ ಸ್ವಾಧೀನ ಇಲ್ಲದೆ ಕಂಗೆಟ್ಟು ದುಃಖದಲ್ಲಿ ದಿನದೂಡುತ್ತಿರುವ ಸಂದರ್ಭ ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಬಿಜೆಪಿ ನಾಯಕರು ಮಾತ್ರ ಅಧಿಕಾರ ಲಾಲಸೆಗಾಗಿ ನಾಯಕತ್ವ ಬದಲಾವಣೆಗೆ ಕಚ್ಚಾಟ ನಡೆಸುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಅತ್ಯಂತ ದೊಡ್ಡ ದ್ರೋಹ ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿರುವುದು ಕರುಣೆ ಇಲ್ಲದ ಸರಕಾರ. ಜನರಿಗಾಗಿ ಸಭೆ ಸೇರಬೇಕಾದವರು, ಕ್ಯೂ ನಿಲ್ಲಬೇಕಾದವರು ಅಧಿಕಾರಕ್ಕಾಗಿ ಪರಸ್ಪರ ಒಬ್ಬರನ್ನೊಬ್ಬರು ಎತ್ತಿಕಟ್ಟಲು ಪಕ್ಷದ ಉಸ್ತುವಾರಿ ಮುಂದೆ ಸಭೆ ಸೇರುತ್ತಾರೆ. ಕ್ಯೂ ನಿಲ್ಲುತ್ತಾರೆ. ಇದು ರಾಜ್ಯದ ಜನರ ದೌರ್ಭಾಗ್ಯ ಅಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ಕಚ್ಚಾಟದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೌರವ, ಘನತೆಗೆ ಧಕ್ಕೆಯಾಗಿದೆ ಎಂದ ಖಾದರ್ ರಾಜ್ಯದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ತಮ್ಮ ರಾಜಕೀಯ ಜಂಜಾಟ-ಕಿತ್ತಾಟವನ್ನು ಕನಿಷ್ಠ ಒಂದು ತಿಂಗಳ ಮಟ್ಟಿಗಾದರೂ ಮುಂದಕ್ಕೆ ಹಾಕಿ ಜನರ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಕೊರೋನಾ ಲಾಕ್ ಡೌನ್ ಇನ್ನೂ ಮುಗಿದಿಲ್ಲ. ಈ ಮಧ್ಯೆ ಸರಕಾರ ನಡೆಸುವವರಿಂದಲೇ ಲಾಕ್ ಡೌನ್ ಮಾರ್ಗಸೂಚಿ ಬ್ರೇಕ್ ಆಗುತ್ತಿದೆ. ಕೆಲವೆಡೆ ಗ್ರಾಮಗಳೇ ಸೀಲ್ ಆಗಿವೆ. ಜನ ಮನೆಯಿಂದ ಹೊರ ಬರಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಮಧ್ಯೆ ಜನ ಮನೆಯಲ್ಲಿದ್ದು, ಟಿವಿಯಲ್ಲಿ ಬಿಜೆಪಿ ನಾಯಕರ ಜಂಜಾಟ-ಕಿತ್ತಾಟ, ನಾಟಕಗಳನ್ನು ನೋಡಬೇಕಾದ ದುಸ್ಥಿತಿ ಬಂದಿದೆ ಎಂದು ಯು ಟಿ ಖಾದರ್ ಬಿಜೆಪಿ ನಾಯಕರ ನಡೆಯ ವಿರುದ್ದ ವಾಗ್ದಾಳಿ ನಡೆಸಿದರು.
0 comments:
Post a Comment